ಬೆಚ್ಚಿಬೀಳಿಸುವ ಕೃತ್ಯ ನಡೆದರೂ ತಲೆ ಹಾಕದ ಆಯೋಗ..ಯಾವ ಪುರುಷಾರ್ಥಕ್ಕೆ.?
ನಿಮಗೆ ನೆನಪಿರಬಹುದು. ಮಣಿಪುರದಲ್ಲಿ ಸರಣಿ ಹತ್ಯಾಕಾಂಡ, ಬೆತ್ತಲೆ ಮೆರವಣಿಗೆ ನಡೆದರೂ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗಕ್ಕೆ ದೊಡ್ಡ ಇಶ್ಯೂ ಆಗಿ ಕಂಡಿದ್ದು ಉಡುಪಿಯ ಜುಜುಬಿ ಟಾಯ್ಲೇಟ್ ಪುರಾಣ. ಉಡುಪಿಯ ಪ್ರತಿಷ್ಠಿತ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಮೋಜಿನಾಟಕ್ಕೆ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇರಿಸಿ ದೃಶ್ಯ ಚಿತ್ರೀಕರಿಸಿ ತದನಂತರ ಕಾಲೇಜು ಆಡಳಿತ ಮಂಡಳಿಗೆ ವಿಷಯ ತಿಳಿದು ವಿದ್ಯಾರ್ಥಿನಿಯರನ್ನು ಕರೆಸಿ ದೃಶ್ಯ ಅಳಿಸಿ ಹಾಕಿಸಿ ಒಟ್ಟಾರೆ ಪ್ರಕರಣ ಕಾಲೇಜು ನಾಲ್ಕು ಗೋಡೆಗಳ ಮಧ್ಯೆ ಇತ್ಯರ್ಥವಾಗಿತ್ತು. ಘಟನೆ ನಡೆದು ಕೆಲವು ದಿನಗಳ ನಂತರ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಈ ಪ್ರಕರಣಕ್ಕೆ ಮತೀಯ ಬಣ್ಣ ಬಳಿಸಿ ದೊಡ್ಡ ಗದ್ದಲ ಮಾಡಿತ್ತು. ಇದಕ್ಕೂ ಕಾರಣವಿತ್ತು. ಬಾತ್ ರೂಮ್ ದೃಶ್ಯ ಸೆರೆ ಹಿಡಿದ ವಿದ್ಯಾರ್ಥಿನಿಯರು ಅನ್ಯ ಕೋಮಿನವರಾಗಿದ್ದರು. ಕೇರಳ ಮೂಲದವರಾಗಿದ್ದರು. ಕೆಲವು ಮೀಡಿಯಾಗಳು ಮಸಾಲೆ ಸೇರಿಸಿ ಇದನ್ನು ದೊಡ್ಡ ಸುದ್ದಿ ಮಾಡಿತ್ತು. ಈ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗದ ಅಧ್ಯಕ್ಷರು ಎದ್ದವೋ ಬಿದ್ದವೋ ಅನ್ನುವಂತೆ ಉಡುಪಿಗೆ ಓಡೋಡಿ ಬಂದರು. ಆ ಸಂದರ್ಭದಲ್ಲಿ ಮಣಿಪುರದಲ್ಲಿ ಆದಿವಾಸಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ರಾಕ್ಷಸಿ ಕೃತ್ಯ ಮಹಿಳಾ ಹಕ್ಕು ಆಯೋಗಕ್ಕೆ ದಿಗ್ಭ್ರಮೆ ಹುಟ್ಟಿಸುವ ಸಂಗತಿ ಆಗಲಿಲ್ಲ. ಉಡುಪಿಯ ಟಾಯ್ಲೆಟ್ ಪ್ರಕರಣ ಆಯೋಗಕ್ಕೆ ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿತ್ತು. ಹುಲಿ ಹಿಡಿಯಲು ಬಂದಿದ್ದ ಆಯೋಗಕ್ಕೆ ಅಲ್ಲಿನ ವಾಸ್ತವಾಂಶ ತಿಳಿದು ಪೆಚ್ಚುಮೋರೆ ಹಾಕಿ ಹೋಗಿದ್ದು ಬೇರೆ ವಿಚಾರ.
ಅದೇ ಉಡುಪಿಯಲ್ಲಿ ವಾರದ ಹಿಂದೆ ದೇಶವೇ ಬೆಚ್ಚಿಬೀಳಿಸುವ ನಾಲ್ವರ ಬರ್ಬರ ಹತ್ಯೆ ನಡೆದಿತ್ತು. ಘಟನೆ ನಡೆದು ವಾರ ಕಳೆದರೂ ಮಹಿಳಾ ಹಕ್ಕು ಆಯೋಗ ಅತ್ತ ತಲೆ ಹಾಕಿಯೇ ಇಲ್ಲ. ಅದರಲ್ಲೂ ಮೂವರು ಮಹಿಳೆಯರು, ಒಬ್ಬ ಬಾಲಕನ ಹತ್ಯೆಯಾಗಿದೆ. ಇಡೀ ಉಡುಪಿ ಶೋಕಸಾಗರದಲ್ಲಿ ಮುಳುಗಿತ್ತು. ರಾಜ್ಯದ ಜನತೆ ಕಣ್ಣೀರು ಹಾಕಿದ್ದರು. ಜುಜುಬಿ ಟಾಯ್ಲೆಟ್ ಪ್ರಕರಣಕ್ಕೆ ಓಡೋಡಿ ಬಂದ ಮಹಿಳಾ ಆಯೋಗಕ್ಕೆ ಇದು ಕ್ರೂರ ಘಟನೆ ಎಂದು ಕಾಣಲಿಲ್ಲವೇ ಅಥವಾ ಆರೋಪಿ ಇತರ ಧರ್ಮಿಯನಾಗಿದ್ದರೆ, ಸಂತ್ರಸ್ತರು ಇನ್ನೊಂದು ಧರ್ಮಕ್ಕೆ ಸೇರಿದ್ದರೆ ಭಯೋತ್ಪಾದನೆ ಮಣ್ಣಾಂಗಟ್ಟಿ , ಜಿಹಾದಿ ಕೃತ್ಯ ಎಂದೆಲ್ಲಾ ಪ್ರಕರಣ ತಿರುಚಿ ಆಯೋಗಕ್ಕೆ ದೊಡ್ಡ ವಿಷಯ ಆಗುತ್ತಿತ್ತು ಅಲ್ಲವೇ? ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗದ ಇಬ್ಬಗೆ ನೀತಿ ಬಗ್ಗೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ರೇಪ್, ಬೆತ್ತಲೆ ಮೆರವಣಿಗೆ, ಸರಣಿ ಹತ್ಯೆಯಂತಹ ಘನಘೋರ ಕೃತ್ಯಗಳು ನಡೆದರೂ ಕಣ್ಣಿದ್ದು ಕುರುಡರಾಗಿರುವ ಮಹಿಳಾ ಹಕ್ಕು ಆಯೋಗ ಇರುವುದು ಯಾವ ಪುರುಷಾರ್ಥಕ್ಕೆ.? ಘಟನೆಯನ್ನು ಧರ್ಮದ ಕನ್ನಡಿಯಲ್ಲಿ ನೋಡುವ ಇಂತಹ ಆಯೋಗಗಳಿಗೆ ಟಾಯ್ಲೆಟ್ ಗಳಿಗೆ ಇರುವಷ್ಟೇ ಬೆಲೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.