‘ನೀವೆಲ್ಲಾ ತಪ್ಪು ತಿಳಿದಿದ್ದೀರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಎಂಟು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ’ ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಅವರು ಹೇಳಿದ ಮಾತು ಪದೇ ಪದೇ ನೆನಪಿಗೆ ಬರುತ್ತಿದೆ. ಹೌದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಬರೀ 2 ಸ್ಥಾನ. ಯು.ಟಿ ಖಾದರ್ ಮತ್ತು ಅಶೋಕ್ ರೈ ಮಾತ್ರ. ಇವರಿಬ್ಬರು ದಾಖಲೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು. ಆದರೆ ಸೈದ್ಧಾಂತಿಕವಾಗಿ ಬಿಜೆಪಿಯನ್ನು ಎದುರಿಸಲಾಗದೆ ಅವರೊಂದಿಗೆ ಕೈ ಜೋಡಿಸಿದವರು. ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಬಹಿರಂಗವಾಗಿಯೇ ಆರ್ ಎಸ್ ಎಸ್ ಬಿಜೆಪಿಯೊಂದಿಗೆ ಭಾಯಿ-ಭಾಯಿ ಸಂಬಂಧವಿದ್ದವರು ಪಕ್ಷದಿಂದ ಹೊರಟು ಹೋಗಬಹುದು ಎಂಬ ಹೇಳಿಕೆ ನೀಡಿದ್ದರೂ ಅದಕ್ಕೆ ತದ್ವಿರುದ್ಧವಾಗಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ರಾತ್ರಿ ಸಂಬಂಧ ಇಟ್ಟುಕೊಂಡಿರುವುದು ಅವರ ನಡವಳಿಕೆಗಳಿಂದಾಗಿ ಜಗಜ್ಜಾಹೀರವಾಗಿದೆ. ಸೈದ್ಧಾಂತಿಕವಾಗಿ ಬಿಜೆಪಿಯನ್ನು ಎದುರಿಸಲಾಗದ ಇಂತಹ ನಾಯಕರು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸುತ್ತಾರೆ ಅನ್ನುವುದನ್ನು ಕಾರ್ಯಕರ್ತರು ನಂಬಿ ಕೂರುವುದು ಮುಠ್ಠಾಳತನ ಅನ್ನದೇ ಬೇರೆ ವಿಧಿಯಿಲ್ಲ.
ಇನ್ನೂ ಪುತ್ತೂರಿನ ಕಾಂಗ್ರೆಸ್ ಶಾಸಕರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೂ, ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಸರಕಾರ ಬಂದಿದ್ದರೆ ಆಪರೇಶನ್ ಕಮಲ ಕ್ಕೆ ಪುತ್ತೂರಿನ ಶಾಸಕರು ಮೊದಲ ಸಾಲಲ್ಲಿ ಇರುತ್ತಿದ್ದರು ಎಂಬ ಹರಿದಾಡುತ್ತಿದ್ದ ಮಾತುಗಳು ಈಗಿನ ಸಂದರ್ಭದಲ್ಲಿ ಅದು ನಿಜವಾಗಬಹುದು ಎಂಬುದು ಈಗ ಕೇಳಿ ಬರುತ್ತಿದೆ.
ಐದು ತಿಂಗಳ ಹಿಂದೆ ಮುಸ್ಲಿಂ ಸಮುದಾಯದ ಕರಾವಳಿಯ ಶಾಸಕರೊಬ್ಬರು ಸ್ಪೀಕರ್ ಹುದ್ದೆ ಏರಿದ್ದಕ್ಕೆ ಸಮುದಾಯವೇ ಬಹಳಷ್ಟು ಖುಷಿ ಪಟ್ಟಿತ್ತು. ಸಮುದಾಯಕ್ಕೊಂದು ದೊಡ್ಡ ಹುದ್ದೆ ಸಿಕ್ಕಿತ್ತೆಂದು. ಆದರೆ ಸ್ಪೀಕರ್ ಅವರು ಹೊಸ ಶಾಸಕರಿಗೆ ಪಾಠ ಮಾಡಿಸಲು ಬಿಜೆಪಿಯ ಪೋಷಕರಾದ ಸಂಘಪರಿವಾರದ ರವಿಶಂಕರ್ ಗುರೂಜಿ, ಕಾಂಗ್ರೆಸ್ ಅನ್ನು ಗೇಲಿ ಮಾಡುತ್ತಿದ್ದ ಬಿಜೆಪಿ ಪರವಾಗಿರುವ ಗುರುರಾಜ ಕರ್ಜಗಿ ಅವರನ್ನು ಆಹ್ವಾನಿಸಲಾಯಿತು. ಬಿಜೆಪಿಯವರು ಮಾಡದ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದರು. ರಾಜ್ಯದಲ್ಲಿ ಜಾತ್ಯತೀತ ಮನೋಭಾವದ ನೂರಾರು ಹಿರಿಯ ಪ್ರಗತಿಪರರು ಇದ್ದರೂ ಆಹ್ವಾನಿಸಿದ್ದು ಮಾತ್ರ ಬಲಪಂಥೀಯರನ್ನು. ಇದು ದೊಡ್ಡ ವಿವಾದವಾದ ಹಿನ್ನೆಲೆಯಲ್ಲಿ ಅವರನ್ನು ನಂತರ ಕೈ ಬಿಡಲಾಯಿತು.
ಇದೀಗ ಇಡೀ ರಾಜ್ಯವೇ ತುದಿಗಾಲಲ್ಲಿ ನಿಂತು ನೋಡುವ ಕುತೂಹಲ ಮೂಡಿಸಿದ್ದ ಕರಾವಳಿ ಭಾಗದ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಕಾಂಗ್ರೆಸ್ ಶಾಸಕ ಅಶೋಕ್ ರೈ ನೇತೃತ್ವದ ತಂಡ ಲೈಂಗಿಕ ಆರೋಪ ಹೊತ್ತ ಬಿಜೆಪಿ ಅತ್ಯಾಚಾರಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನಿಸಿ ಪೇಚಿಗೆ ಸಿಲುಕಿದೆ. ಕಾಂಗ್ರೆಸ್ ಹೈಕಮಾಂಡ್ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ಬಂಧಿಸುವಂತೆ ಹೋರಾಟ ಮಾಡಿತ್ತು. ಅದೇ ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ಆರೋಪಿ ಹಿನ್ನೆಲೆಯ ಸಂಘಪರಿವಾರದ ಸಂಸದನನ್ನು ಕಂಬಳಕ್ಕೆ ಆಹ್ವಾನಿಸುವ ಅಗತ್ಯವೇನಿತ್ತು? ಅಷ್ಟೂ ಸಾಲದಕ್ಕೆ ಸಿದ್ದಿ ಸಮುದಾಯದ ಬೇಡಿಕೆ ಅನ್ನುವ ಟ್ಯಾಗ್ ಲೈನ್ ಬೇರೆ. ತಾವು ರಾತ್ರಿ ಸಂಬಂಧ ಹೊಂದಿರುವುದನ್ನು ಮರೆ ಮಾಚಲು ಸಮುದಾಯದ ಹೆಸರು ಬಳಕೆ ಎಷ್ಟು ನ್ಯಾಯ? ಕೊನೆಗೆ ದೊಡ್ಡ ವಿವಾದ ಆಗುತ್ತಿದ್ದಂತೆ ಬ್ರಿಜ್ ಭೂಷಣ್ ಸಿಂಗ್ ಆಹ್ವಾನವನ್ನು ರದ್ದುಪಡಿಸಲಾಯಿತು.
ಇನ್ನು ಕಂಬಳ ರಾಜಕೀಯಗೊಳಿಸುವುದು ಸರಿಯಲ್ಲ. ಅದು ಜಾನಪದ ಕ್ರೀಡೆ ಅನ್ನುವ ಮಾತುಗಳು ಸಮರ್ಥನೆಗೆ ಓಡಾಡುತ್ತಿದೆ. ಜನರೇನೂ ಮುಠ್ಠಾಳರಲ್ಲ. ಕಂಬಳ ರಾಜಕೀಯ ರಹಿತವಾಗಿ ನಡೆಸುವುದಾದರೆ ರಾಜಕಾರಣಿಗಳು ಅದರ ಆಯೋಜನೆಯಿಂದ ಹಿಂದೆ ಸರಿಯಬೇಕು. ಒಬ್ಬೊಬ್ಬ ರಾಜಕಾರಣಿ ಒಂದೊಂದು ಕಂಬಳವನ್ನು ಓಟು ಬ್ಯಾಂಕಿಗೋಸ್ಕರ ಮಾಡುತ್ತಿರುವುದು. ಕರಾವಳಿ ಭಾಗದಲ್ಲಿ ಬಿಜೆಪಿ ಕಂಬಳ, ಕಾಂಗ್ರೆಸ್ ಕಂಬಳ ಇದೇ ಹೊರತು ಜಾನಪದ ಕ್ರೀಡೆ ಕಂಬಳ ನಡೆಯುತ್ತಿಲ್ಲ ಅನ್ನುವುದು ಅಷ್ಟೇ ಸತ್ಯ.
ಕುಸ್ತಿ ಪಟುಗಳಿಗೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಅತಿಥಿಯಾಗಿ ಬೇಕಿತ್ತಾ? ದೇಶದಾದ್ಯಂತ ಎಷ್ಟೋ ಸಾಧಕರಿರುವಾಗ ಸಂಘಪರಿವಾರದ ಆರೋಪಿ ಸಂಸದನ ಅಗತ್ಯ ಇತ್ತೇ?
ಇದು ಕೇವಲ ಕಂಬಳಕ್ಕೆ ಸೀಮಿತವಲ್ಲ. ಇಂದು ಬಹುತೇಕ ಕರಾವಳಿಯಲ್ಲಿ ನಡೆಯುವ ಬ್ರಹ್ಮ ಕಲಶ, ನೇಮ, ಕೋಲಗಳನ್ನು ಸಂಘಟಿಸುವವರು ಕಾಂಗ್ರೆಸ್ಸಿಗರು. ಅದನ್ನು ಹೈಜಾಕ್ ಮಾಡಿ ರಾಜಕಾರಣ ಮಾಡುವವರು ಬಿಜೆಪಿಗರು. ಕಂಬಳಕ್ಕೆ ಒಂದು ಕೋಟಿ ಅನುದಾನ ನೀಡುವುದು ಕಾಂಗ್ರೆಸ್ ಸರಕಾರ. ಅದನ್ನು ಹೈಜಾಕ್ ಮಾಡಿ ಉದ್ಘಾಟನೆ, ವಿಶೇಷ ಆಹ್ವಾನಿತ ರಾಗಿ ಕ್ರೆಡಿಟ್ ಪಡೆದುಕೊಳ್ಳುತ್ತಿರುವುದು ಬಿಜೆಪಿ ಹಾಗೂ ಸಂಘ ಪರಿವಾರ. ಹೇಗಿದೆ ಕಾಂಗ್ರೆಸ್ಸಿಗರ ತಲೆಬುರುಡೆ! ಇನ್ನಾದರೂ ಬಹಿರಂಗ ವೇದಿಕೆಗಳಲ್ಲಿ ಮಾತ್ರ ಕೋಮುವಾದ, ಬಿಜೆಪಿಯನ್ನು ದೂರಿದರೆ ಸಾಲದು. ಸೈದ್ಧಾಂತಿಕವಾಗಿ, ರಾತ್ರಿ ಸಂಬಂಧ ದಿಂದ ದೂರವಾದರೆ ಮಾತ್ರ ಇಂತಹ ಎಡವಟ್ಟುಗಳಿಂದ ಬಚಾವಾಗಬಹುದು.