ಮಂಗಳೂರು :ಮಂಗಳೂರು ನಗರದ ಹೊರವಲಯ ಸುರತ್ಕಲ್ ಭಾಗದಲ್ಲಿ ಸಣ್ಣದೊಂದು ರಸ್ತೆ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ 16 ವರುಷ ಪ್ರಾಯದ ಬಾಲಕ ಪ್ರಥಮ ಪಿಯುಸಿ ವಿದ್ಯಾರ್ಥಿ ಮೊಯಿದಿನ್ ಫರಾನ್ ಹೆಚ್ಚಿನ ಚಿಕಿತ್ಸೆಗಾಗಿ ಅಥರ್ವ ಒರ್ಥ್ತೋ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಬಲ ಕಾಲಿಗೆ ತಗುಲಿದ ಗಾಯಕ್ಕೆ ಸಣ್ಣದೊಂದು ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲು ಅಲ್ಲಿನ ವೈದ್ಯರು ಸಲಹೆ ನೀಡಿದ್ದು ಅದರ ಪ್ರಕಾರ ಶಸ್ತ್ರ ಚಿಕಿತ್ಸೆಗೆ ಮುನ್ನ ಅರಿವಳಿಕೆಗಾಗಿ ಚುಚ್ಚು ಮದ್ದು ನೀಡುವಲ್ಲಿನ ಎಡವಟ್ಟಿನಿಂದಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಾಲಕ ಶಸ್ತ್ರ ಚಿಕಿತ್ಸೆಯ ನಂತರವೂ ಸಹಜ ಸ್ಥಿತಿಗೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಅಥರ್ವ ಆಸ್ಪತ್ರೆಯ ವೈದ್ಯರುಗಳು ತಮ್ಮ ತಪ್ಪಾದ ಚಿಕಿತ್ಸೆಯ ಎಡವಟ್ಟಿನಿಂದ ನುಣುಚಿಕೊಳ್ಳುವ ಪ್ರಯತ್ನದ ಭಾಗವಾಗಿ ಬಾಲಕನ ಮನೆಮಂದಿಯನ್ನು ದಿಕ್ಕುತಪ್ಪಿಸಿ ತರಾತುರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗೀ ಆಸ್ಪತ್ರೆಗೆ ರವಾನಿಸಿದ ಸಂದರ್ಭ ದಾರಿ ಮಧ್ಯೆ ಜೀವವನ್ನು ಕಳೆದುಕೊಳ್ಳುವಂತಾಗಿದೆ. ಈ ಎಲ್ಲಾ ಬೆಳವಣೆಗೆಯನ್ನು ಕಂಡಾಗ ಅಥರ್ವ ಆಸ್ಪತ್ರೆಯ ವೈದ್ಯರುಗಳ ತಪ್ಪಾದ ಚಿಕಿತ್ಸಾ ಕ್ರಮ, ಅರಿವಳಿಕೆ ನೀಡುವಲ್ಲಿನ ಎಡವಟ್ಟಿನಿಂದಾಗಿ ಸಣ್ಣ ಪ್ರಾಯದ ಅಮಾಯಕ ಯುವಕ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ಕಾರಣವಾಗಿದೆ.
ಮೆಡಿಕಲ್ ಹಬ್ ಎಂದು ಕರೆಯಲಾಗುವ ಮಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನನಿತ್ಯ ಒಂದಲ್ಲ ಒಂದು ಖಾಸಗೀ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯ ಮೌನ ಖಾಸಗೀ ಆಸ್ಪತ್ರೆಗಳಿಗೆ ಲೂಟಿ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಮಾತ್ರವಲ್ಲ ತಪ್ಪಾದ ಚಿಕಿತ್ಸಾ ಕ್ರಮದಿಂದ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲು ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಪಾದಿಸಿದೆ. ತಪ್ಪಾದ ಚಿಕಿತ್ಸಾ ಕ್ರಮದಿಂದ ಪ್ರಾಣ ಕಳೆದುಕೊಂಡ ಮೊಯಿದಿನ್ ಫರಾನ್ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತನಿಖೆಗೊಳಪಡಿಸಬೇಕು. ಕರ್ತವ್ಯ ಲೋಪ ಎಸಗಿದ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಮಾತ್ರವಲ್ಲ ಸಂತ್ರಸ್ತ ಕುಟುಂಬಕ್ಕೆ ಗರಿಷ್ಟ ಒಂದು ಕೋಟಿ ಆರ್ಥಿಕ ಪರಿಹಾರ ನೀಡಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.
ಬಾಲಕ ಮೊಯಿದಿನ್ ಫರಾನ್ ಸಾವಿಗೆ ಕಾರಣರಾದ ಅಥರ್ವ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ ಅನಾಹುತಕ್ಕೆ ಕಾರಣರಾದ ವೈದ್ಯರನ್ನು ವೈದ್ಯಕೀಯ ಸೇವೆಯಿಂದ ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ವಿಫಲರಾದರೆ ಸಂತ್ರಸ್ತ ಕುಟುಂಬ ಮತ್ತು ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ