ವಿದ್ಯಾಗಿರಿ ಆಳ್ವಾಸ್ ಗೆ ಬಿಗ್ ಶಾಕ್.. ಸದ್ಯದಲ್ಲೇ ಪಿ.ಯು ಕಾಲೇಜಿಗೆ ಕೊಕ್..! ತನಿಖಾ ತಂಡದ ರೀಪೋರ್ಟ್.!

ಕರಾವಳಿ

ರಾಜ್ಯದಲ್ಲಿಯೇ ಗಮನ ಸೆಳೆದಿರುವ, ಶಿಕ್ಷಣ ಕಾಶಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸಂಕಷ್ಟ ಎದುರಾಗಿದ್ದು, ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮತ್ತು ದಾಖಲಾತಿಯ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿರುವುದು ತನಿಖಾ ತಂಡದ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಮಾನ್ಯತೆ ರದ್ದು ಆಗುವ ಭೀತಿ ಇದೀಗ ಎದುರಾಗಿದೆ.

ರಮೇಶ್‌ ಬೆಟ್ಟಯ್ಯ ಎಂಬುವರು ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಆಳ್ವಾಸ್‌ ಪದವಿಪೂರ್ವ ಕಾಲೇಜಿಗೆ ನೀಡಿರುವ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಬಗ್ಗೆ ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ 2023ರ ನವೆಂಬರ್‍‌ 22ರಂದು ನಿರ್ದೇಶಿಸಿದ್ದಾರೆ. ಇಲಾಖೆಯ ಅಧೀನ ಕಾರ್ಯದರ್ಶಿ ಎಸ್‌ ಎನ್‌ ಪದ್ಮಿನಿ ಅವರು ಪಿಯು ಮಂಡಳಿಯ ನಿರ್ದೇಶಕರಿಗೆ ಪತ್ರ (ಸಂಖ್ಯೆ ; ಇಪಿ 167 ಎಸ್‌ ಹೆಚ್‌ ಹೆಚ್‌ 2020, ದಿನಾಂಕ 22-11-2023) ಬರೆದಿದ್ದಾರೆ.

ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರು ಬರೆದಿದ್ದ ಪತ್ರ (ಸಂಖ್ಯೆ ಪಪೂಶಿ/ಸಿ-2;ಸಿಆರ್‍‌ 4;1164193/ದೂರು/2019-20 ದಿನಾಂಕ 05-12-2022),( ಸಂಖ್ಯೆ; ಪಪೂಶಿ/ಸಿ-2;ಸಿಆರ್‍‌ 4;1164193/ದೂರು/2019-20 ದಿನಾಂಕ 24-05-2023)ಗಳಲ್ಲಿನ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ಮತ್ತು ಇಲಾಖೆ ದಾಖಲಾತಿ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ತನಿಖಾ ತಂಡ ವರದಿಯನ್ವಯ ದೃಢಪಟ್ಟಿರುವುದರಿಂದ ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್‌ 39ರ ಅನ್ವಯ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಬಗ್ಗೆ ನಿಯಮಾನುಸಾರ ಕ್ರಮವಹಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ವಿದ್ಯಾಸಂಸ್ಥೆಗೆ ಇಂತಹ ಗತಿ ಬಂದಿರುವುದು, ಇದೀಗ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ. ನುಡಿಸಿರಿ-ವಿರಾಸತ್ ನಂತಹ ಅತ್ಯದ್ಭುತ ಕಾರ್ಯಕ್ರಮದ ಮೂಲಕ ಹಿರಿಮೆಗೆ ಪಾತ್ರರಾಗಿದ್ದ ವಿದ್ಯಾಗಿರಿಗೆ ಸಂಕಷ್ಟ ಎದುರಾಗಿದೆ.