2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ಚುನಾವಣೆಯಲ್ಲಿ ಸೋತಿರುವ ಮುರುಗೇಶ್ ನಿರಾಣಿ, ಕೆ ಸುಧಾಕರ್, ಸಿ.ಟಿ ರವಿ ಸೇರಿದಂತೆ ಅನೇಕರು ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಹಾಗೆಯೇ ಜಿ.ಎಂ.ಸಿದ್ದೇಶ್ವರ್, ಸುರೇಶ ಅಂಗಡಿ, ಬಿ.ಎನ್.ಬಚ್ಚೇಗೌಡ, ಜಿ.ಎಸ್ ಬಸವರಾಜ್, ಡಿ.ವಿ.ಸದಾನಂದ ಗೌಡ, ಪಿ.ಸಿ. ಗದ್ದಿಗೌಡರ, ಕರಡಿ ಸಂಗಣ್ಣ, ಉದಾಸಿ ಸೇರಿದಂತೆ ಕನಿಷ್ಠ 10 ಹಾಲಿ ಬಿಜೆಪಿ ಸಂಸದರು ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಆದರೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಸಿಗದಿರಲೂಬಹುದು.
ಈಗಾಗಲೇ ಟಿಕೆಟ್ ಸಿಗದೇ ಇರುವ ಸಂಶಯವಿದ್ದರಿಂದ, ಕೇಂದ್ರನಾಯಕರ ಸೂಚನೆಯ ಮೇರೆಗೆ, ವಯೋಮಾನದ ಕಾರಣದಿಂದಾಗಿ ಸದಾನಂದ ಗೌಡ, ಜಿ.ಎಸ್ ಬಸವರಾಜು, ಬಚ್ಚೇಗೌಡ ಅವರುಗಳು ಈಗಾಗಲೇ ಗೌರವ ಪೂರ್ವಕ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ತನ್ನ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಸುರೇಶ್ ಅಂಗಡಿ, ಕರಡಿ ಸಂಗಣ್ಣ ಅಮರಪ್ಪ, ಸಿದ್ದೇಶ್ವರ, ಮತ್ತು ಪಿಸಿ ಗದ್ದಿಗೌಡರ್,ಅವರಿಗೆ ಪಕ್ಷ ಟಿಕೆಟ್ ನಿರಾಕರಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡಿರುವ ನಿರಾಣಿ ಮತ್ತು ಸುಧಾಕರ್ ಇಬ್ಬರಿಗೂ ಟಿಕೆಟ್ ಪಡೆಯುವ ಹೆಚ್ಚಿನ ಅವಕಾಶ ಹೆಚ್ಚಿದೆ.