‘ರಾಮಯ್ಯ’ ಗೆಲ್ಲುವ ಲೆಕ್ಕಾಚಾರ ಹೇಗಿದೆ.? ನಾವಿಕನನಿಲ್ಲದ ಹಡಗಿನಂತಾಗಿದೆ ಜಿಲ್ಲಾ ಕಾಂಗ್ರೆಸ್.!
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿ ಘೋಷಣೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಂಗಳೂರಿನ ಕಾರ್ಯಕ್ರಮದಲ್ಲಿ ಮುಂದಿನ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರನ್ನು ಪ್ರಚಂಡ ಬಹುಮತಗಳ ಅಂತರದಿಂದ ಗೆಲ್ಲಿಸುವಂತೆ ಘಂಟಾಘೋಷವಾಗಿ ಸಾರಿದ್ದಾರೆ. ಚುನಾವಣೆ ಮುನ್ನವೇ ಅಭ್ಯರ್ಥಿ ಕನ್ಫಾರ್ಮ್ ಆಗಿ ಬಿಟ್ಟಿದೆ. ಇತ್ತ ಕಟೀಲರ ವಿರೋಧಿ ಗುಂಪು ಪುತ್ತಿಲ ಪರಿವಾರ ವಿಜಯೇಂದ್ರದ ಘೋಷಣೆಯಿಂದ ಕೆಂಡಾಮಂಡಲರಾಗಿದ್ದು ಮತ್ತೆ ಪುತ್ತಿಲ ಅನ್ನುವ ಸೋಷಿಯಲ್ ಮೀಡಿಯಾ ಕ್ಯಾಂಪೈನ್ ಗೆ ಇಳಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಪವರ್ ಮುಂದೆ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆದರೆ ಇದು ಲೋಕಸಭಾ ಚುನಾವಣೆಯಾಗಿರುವುದರಿಂದ, ಹಿಂದುತ್ವದ ಭದ್ರಕೋಟೆಯಾಗಿರುವ ಕರಾವಳಿಯಲ್ಲಿ, ಮೋದಿ ಮುಖವನ್ನಿಟ್ಟು ಚುನಾವಣೆಗೆ ಇಳಿಯುವುದರಿಂದ ಪುತ್ತಿಲ ಎಫೆಕ್ಟ್ ಅಷ್ಟೇನೂ ಪರಿಣಾಮ ಬೀರದು ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ತಯಾರಿ, ಲೆಕ್ಕಾಚಾರ ಹೇಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗುತ್ತಿಲ್ಲ. ಈಗಾಗಲೇ ಬ್ಲಾಕ್ ಮಟ್ಟಕ್ಕೆ ವೀಕ್ಷಕರನ್ನು ನೇಮಿಸಿದೆ. ಇನಾಯತ್ ಅಲಿ, ರಮಾನಾಥ ರೈ, ಹರೀಶ್ ಕುಮಾರ್, ವಿವೇಕ್ ಪೂಜಾರಿ, ಪದ್ಮರಾಜ್ ಹೆಸರು ಓಡಾಡುತ್ತಿದ್ದರೂ ಅಭ್ಯರ್ಥಿ ಯಾರೆಂಬುದು ಈವರೆಗೂ ಕನ್ಫರ್ಮ್ ಆಗಿಲ್ಲ.
ಈ ಬಾರಿ ಅಲ್ಪಸಂಖ್ಯಾತ ಮುಸ್ಲಿಂ ವರ್ಗಕ್ಕೆ ಟಿಕೆಟ್ ನೀಡಬೇಕು ಅನ್ನುವ ಕೂಗು ಒಂದೆಡೆ ಬಹಳ ಜೋರಾಗಿ ಕೇಳಿ ಬರುತ್ತಿದ್ದು, ಹೈಕಮಾಂಡ್ ಮುಸ್ಲಿಂ ಸಮುದಾಯಕ್ಕೆ ಟಿಕೇಟ್ ನೀಡುವುದಿದ್ದರೆ ಇನಾಯತ್ ಅಲಿ ಪರ್ಫೆಕ್ಟ್ ಕ್ಯಾಂಡಿಡೇಟ್ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವಧರ್ಮದ ಯುವಕರ ದಂಡೇ ಇನಾಯತ್ ಅಲಿ ಬೆನ್ನಿಗೆ ನಿಲ್ಲುತ್ತದೆ. ಸಮುದಾಯದ ಬೆಂಬಲವೂ ಇದೆ.
ಇನ್ನು ಉಳಿದ ಅಭ್ಯರ್ಥಿಗಳು ರೇಸಿನಲ್ಲಿ ಇದ್ದರೂ ಪಕ್ಷಕ್ಕೆ ಅವರ ಕೊಡುಗೆ ಏನು.? ಎಷ್ಟು ಮಂದಿ ನಾಯಕರನ್ನು ಬೆಳೆಸಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ಮೂವತ್ತು-ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ ಅನ್ನುವ ಜಿಲ್ಲಾ ನಾಯಕರು ತಮ್ಮ ಕ್ಷೇತ್ರದಲ್ಲಿ ಎಷ್ಟು ಯುವ ನಾಯಕರನ್ನು ಸೃಷ್ಟಿಸಿದ್ದಾರೆ, ವೈಯಕ್ತಿಕ ವರ್ಚಸ್ಸು ಉಳಿಸಿಕೊಂಡಿದ್ದಾರೆ ಎಂಬುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಬಂಟ್ವಾಳ ಕ್ಷೇತ್ರವನ್ನೊಮ್ಮೆ ಊಹಿಸಿಕೊಳ್ಳಿ. ಕಳೆದ 40-45 ವರ್ಷಗಳಿಂದ ಕಾಂಗ್ರೆಸ್ ನಿಂದ ಒಬ್ಬರ ಹೆಸರೇ ಕೇಳಿ ಬರುತ್ತಿದೆ. ಪ್ರಭಾವಿ ಸಚಿವರಾಗಿ ವಿವಿದ ಹುದ್ದೆಯನ್ನು ಅಲಂಕರಿಸಿ ಕೆಲಸ ಮಾಡಿದ ಮಾಜಿ ಸಚಿವರು ತಮ್ಮ ಕ್ಷೇತ್ರದಲ್ಲಿ ಯುವ ನಾಯಕರು ಬೆಳೆದರೆ ತಮ್ಮ ಕುರ್ಚಿಗೆ ಕಂಟಕವಾಗಬಹುದು ಎಂಬುದನ್ನು ಅರಿತು ಮೊಳಕೆಯಲ್ಲೇ ಚಿವುಟಿ ಹಾಕಿದ್ದೇ ಹೆಚ್ಚು.!ಹಿಂಬಾಲಕರನ್ನಾದರೂ ಬೆಳೆಸಿದ್ದರಾ.. ಅಂದುಕೊಂಡರೆ ಅದು ಇಲ್ಲ. ಕೇವಲ ಜೈಕಾರ,ಬಹು ಫರಾಖ್ ಹಾಕಿಸಿಕೊಳ್ಳುವವರನ್ನು ಮಾತ್ರ ಹತ್ತಿರ ಸೇರಿಸಿಕೊಳ್ಳುತ್ತಿದ್ದಾರೆ. ಇನ್ನು ಸುತ್ತ ಮುತ್ತ ಕೆಲವು 80 ದಾಟಿದ ಬೆರಳೆಣಿಕೆಯ ಜೀವಗಳು ಮಾತ್ರ ಇದೆ. ಇನ್ನು ಉಳ್ಳಾಲ ಕಡೆ ನೋಡಿ. ಅಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಒಂದೇ ಕುಟುಂಬದ ನಾಯಕರು ದರ್ಬಾರ್ ನಡೆಸುತ್ತಿದ್ದಾರೆ. ಅವರನ್ನು ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್ ಅನ್ನು ಕಾಂಗ್ರೆಸ್ಸಿಗರೇ ತಮ್ಮ ಬೆಳವಣಿಗೆಗೆ ಉಪಯೋಗಿಸಿಕೊಂಡಿದ್ದಾರೆಯೇ ಹೊರತು ಪಕ್ಷದ ವೃದ್ಧಿ, ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕೊಡುವವರೇ ಇಲ್ಲ. ಇದೇ ಕಾರಣದಿಂದ ಪ್ರತಿ ಚುನಾವಣೆಗೂ ಹೆಚ್ಚೆಚ್ಚು ಅಂತರದಿಂದ ಬಿಜೆಪಿ ಗೆಲ್ಲುತ್ತಿರುವುದು.
ಹಾಗಾದರೆ ಬಿಜೆಪಿ ಕಟೀಲು ವಿಜಯ ಯಾತ್ರೆಗೆ ತಡೆಯೊಡ್ಡಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ ಬಿಡಿ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾರ ಮುಲಾಜಿಗೂ ಒಳಗಾಗದೆ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದರೆ ಗೆಲುವು ಸಾಧ್ಯ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜನಾರ್ದನ ಪೂಜಾರಿ ಯವರ ಅತ್ಯಂತ ಆಪ್ತರಾಗಿರುವ, ಕುದ್ರೋಳಿ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ ಹೆಸರು ಇದೀಗ ಕಾರ್ಯಕರ್ತರೆಡೆಯಲ್ಲಿ ಚಾಲ್ತಿಗೆ ಬರುತ್ತಿದೆ. ಸೌಮ್ಯ ಸ್ವಭಾವದ ಪದ್ಮರಾಜ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ವಕೀಲರಾಗಿರುವ ಇವರಿಗೆ ರಾಜಕಾರಣದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಹೇಳಲಾಗುತ್ತಿದೆ. ಬಿಲ್ಲವರಾಗಿರುವ ಪದ್ಮರಾಜ್ ದೇವಾಲಯದ ಸೇವೆಯಲ್ಲಿ ನಿರತರಾಗಿರುವುದರಿಂದ ಬಿಜೆಪಿಯವರು ಇವರನ್ನು ಹಿಂದೂ ವಿರೋಧಿ ಅನ್ನಲು ಯಾವುದೇ ಕಾರಣವಿರುವುದಿಲ್ಲ. ಜಿಲ್ಲೆಯಾದ್ಯಂತ ಬಿಜೆಪಿಯವರಿಗಿಂತ ಹೆಚ್ಚಾಗಿ ತಮ್ಮ ಸಮುದಾಯದ ಜೊತೆಗೆ ಸಮಾಜದ ಸೇವೆ ಮಾಡುತ್ತಿದ್ದಾರೆ. ಗುರು ಬೆಳದಿಂಗಲು ಅನ್ನುವ ಟ್ರಸ್ಟ್ ಮೂಲಕ ಸಾವಿರಾರು ಅಶಕ್ತರಿಗೆ ನೆರವಾಗುವ ಮೂಲಕ ಕಾರುಣ್ಯ ಸೇವೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಇನ್ನು ಅಲ್ಪಸಂಖ್ಯಾತ ವರ್ಗದೊಂದಿಗೂ ಒಳ್ಳೆಯ ಓಡನಾಟವಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಭಾಗದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ಬಿಜೆಪಿ ಎದುರಾಳಿಯಾಗಿ ಪುತ್ತಿಲ ಪರಿವಾರ ಕಣಕ್ಕಿಳಿದರೆ, ಇತ್ತ ಕಾಂಗ್ರೆಸ್ ನಿಂದ ಪದ್ಮರಾಜ್ ರಾಮಯ್ಯ ರಿಗೆ ಟಿಕೆಟ್ ಫಿಕ್ಸ್ ಆದರೆ ಲೋಕಸಭಾ ಕ್ಷೇತ್ರದ ಚಿತ್ರಣವೇ ಬದಲಾಗಬಹುದು.