ರಾಹುಲ್‌ ಗಾಂಧಿಗೆ ಎದುರಾಗಿದೆ ಮತ್ತೊಂದು ಸಂಕಷ್ಟ.! 2018 ರಲ್ಲಿ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ; ಕೋರ್ಟ್‌ ಸಮನ್ಸ್‌ ಜಾರಿ

ರಾಷ್ಟ್ರೀಯ

ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2018ರಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣ ವಿಚಾರವಾಗಿ ರಾಹುಲ್‌ ಗಾಂಧಿಯವರಿಗೆ ಕೋರ್ಟ್‌ ಸಮನ್ಸ್‌ ನೀಡಿದೆ. 2018ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಗಾಂಧಿಯವರು ಅಮಿತ್‌ ಶಾ ಅವರನ್ನು ಕೊಲೆಗಾರ (Murderer) ಅಂತ ಸಂಭೋದಿಸಿದ್ದರು.

ಇದೇ ವಿಚಾರವಾಗಿ ಉತ್ತರಪ್ರದೇಶದ ಸುಲ್ತಾನ್‌ಪುರ್‌ನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್‌ ಮಿಶ್ರ ಎಂಬವರು ರಾಹುಲ್‌ ವಿರುದ್ಧ ಎಂ.ಪಿ /ಎಂ.ಎಲ್.ಎ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. 5 ವರ್ಷಗಳ ನಂತರ ಇದೀಗ ಕೋರ್ಟ್‌ ರಾಹುಲ್‌ ಗಾಂಧಿಯವರಿಗೆ ಡಿಸೆಂಬರ್‌ 16 ರಂದು ಖುದ್ದು ಹಾಜರಾಗುವಂತೆ ಸಮನ್ಸ್‌ ನೀಡಿದೆ. ಸರಿಯಾದ ಸಾಕ್ಷಿ ಆಧಾರಗಳು ದೊರೆತಲ್ಲಿ ಸಂಕಷ್ಟ ತಪ್ಪಿದ್ದಲ್ಲ.!

2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ಮೋದಿ ಬಗ್ಗೆ ಮಾತನಾಡಿದ್ದ ರಾಹುಲ್‌ ಗಾಂಧಿ, ಕಳ್ಳರಿಗೆಲ್ಲಾ ಮೋದಿ ಎನ್ನುವ ಸರ್‌ನೇಮ್‌ ಯಾಕಿರುತ್ತದೆ ಎಂದು ಪ್ರಶ್ನೆ ಮಾಡಿದ್ದರು. ರಾಹುಲ್‌ ಗಾಂಧಿ ಅವರ ಈ ಹೇಳಿಕೆಯ ಕುರಿತಾಗಿ ಬಿಜೆಪಿ ಶಾಸಕ ಹಾಗೂ ಅಂದಿನ ಸಚಿವ ಪೂರ್ಣೆಶ್‌ ಮೋದಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.ಕೋರ್ಟ್‌ ರಾಹುಲ್‌ ಗಾಂಧಿಯನ್ನು ತಪ್ಪಿತಸ್ಥ ಎನ್ನುವ ಮೂಲಕ ಎರಡು ವರ್ಷ ಶಿಕ್ಷೆ ಘೋಷಣೆ ಮಾಡಿತ್ತು.