ಸುಪ್ರೀಂ ಕೋರ್ಟ್ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಐದು ತಿಂಗಳ ನಂತರ ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದ್ದು ಹಾಗೆ ಮಾಡಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ. ಟ್ರಾನ್ಸ್-ವುಮನ್ 35 ವರ್ಷದ ಮಾಯಾ ಗುರುಂಗ್ ಮತ್ತು 27 ವರ್ಷದ ಸುರೇಂದ್ರ ಪಾಂಡೆ ಸಲಿಂಗಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ.
2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು. 2015ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. 2023ರ ಜೂನ್ 27ರಂದು ಗುರುಂಗ್ ಸೇರಿದಂತೆ ಅನೇಕ ಜನರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತು. ಆದರೆ ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, ನಾಲ್ಕು ತಿಂಗಳ ಹಿಂದೆ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತು. ಆ ಸಮಯದಲ್ಲಿ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹದ ಅರ್ಜಿ ವಜಾ ಹಾಕಿತ್ತು. ಆದರೆ ಇದೀಗ ಇವರಿಬ್ಬರ ವಿವಾಹ ನೋಂದಣಿ ಮಾಡಲಾಗಿದ್ದು ಇದು ನೇಪಾಳದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಾಗಿದೆ.