ಮ್ಯೂಸಿಕ್ ಕಂಪನಿ ಮಾಲೀಕನ ವಿರುದ್ಧ ವಿದೇಶಿ ಮಹಿಳೆಯನ್ನು ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆ ಮಾಡಿದ ಆರೋಪ, ಕೇಸು ದಾಖಲು

ರಾಷ್ಟ್ರೀಯ

ಮುಂಬೈನ ಮ್ಯೂಸಿಕ್ ಕಂಪನಿ ಮಾಲೀಕನೊಬ್ಬನ ವಿರುದ್ಧ ವಿದೇಶಿ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆ ಆರೋಪ ಮಾಡಿದ್ಧಾರೆ. ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮ್ಯೂಸಿಕ್ ಕಂಪನಿ ಮಾಲೀಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮ್ಯೂಸಿಕ್ ಈವೆಂಟ್ ಕಂಪನಿಯಾದ ಸ್ಲಿಕ್ ಎಂಟರ್‌ಟೈನ್‌ಮೆಂಟ್ ಮಾಲೀಕ ಪ್ರತೀಕ್ ಪಾಂಡೆ ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, 2020ರಲ್ಲಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ವಿದೇಶಿ ಮಹಿಳೆ ನೀಡಿದ ದೂರಿನಡಿ ಬಾಂದ್ರಾ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಪೊಲೀಸರು, ಈಗಾಗಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಡಿಸೆಂಬರ್ 2ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಪ್ರತೀಕ್​ ಪಾಂಡೆ ಮೊದಲಿಗೆ ಆಕೆಯ ಮೊಬೈಲ್​ ನಂಬರ್‌ಗೆ ಜೋಕ್ ಕಳುಹಿಸುವ ಮೂಲಕ ಸಲುಗೆ ಬೆಳೆಸಿಕೊಂಡಿದ್ದ. ನಂತರ ಬಾಂದ್ರಾದ ತಮ್ಮ ಮನೆಗೆ ಕರೆಸಿಕೊಂಡು ದೈಹಿಕವಾಗಿ ಕಿರುಕುಳ ನೀಡಿದ್ದ, ಅಲ್ಲದೇ ಕೆಲಸ ನೀಡುವ ಬದಲಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಒಮ್ಮೆ ಚಲಿಸುತ್ತಿದ್ದ ಆಟೋದಲ್ಲಿ ತನ್ನ ಖಾಸಗಿ ಅಂಗವನ್ನು ಮುಟ್ಟುವಂತೆ ಹೇಳಿ ಕಿರುಕುಳ ಕೊಟ್ಟಿದ್ದ. ಇಷ್ಟೇ ಅಲ್ಲ, ಕೋಲ್ಕತ್ತಾ, ಬೆಂಗಳೂರು, ಇಂದೋರ್ ಮತ್ತು ಅಂತಾರಾಷ್ಟ್ರೀಯ ಸಂಗೀತೋತ್ಸವದಲ್ಲೂ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರುಗಳಲ್ಲಿ ಹೇಳಲಾಗಿದೆ.

ವಿದೇಶಿ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಲೈಂಗಿಕ ಕಿರುಕುಳ, ಹಿಂಬಾಲಿಸುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್​ಗಳಲ್ಲಿ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.