ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 ರಂತೆ ಸಂರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯವಾಗಿದೆ. ಅವುಗಳ ಮಾಹಿತಿಗಳನ್ನು ಕೇಳಿದರೆ “ಕಡತ ಲಭ್ಯವಿಲ್ಲ” ಎಂಬ ಸಿದ್ಧ ಉತ್ತರ ಕೊಡುವವರಿಗೆ ಜೈಲು ಶಿಕ್ಷೆ ಕಾದಿದೆ ಎಂಬುದು ಕರ್ನಾಟಕ ಮಾಹಿತಿ ಆಯೋಗ ನೀಡಿರುವ ಆದೇಶದಿಂದ ತಿಳಿದುಬರುತ್ತದೆ.
ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010
2010 ರಲ್ಲಿ ಜಾರಿಯಾದ ಈ ಕಾನೂನಿನಡಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಸಂರಕ್ಷಿಸಬೇಕಿರುತ್ತದೆ. ಅಂತಹ ದಾಖಲೆ, ಕಡತ, ಪುಸ್ತಕ ಅಥವಾ ಕಾಗದ ಪತ್ರಗಳು ಕಳುವಾದರೆ, ಕಾಣೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ಅಥವಾ 10 ಸಾವಿರವರೆಗಿನ ದಂಡದಿಂದ ಅಥವಾ ಇವೆರಡರಿಂದಲೂ ದಂಡಿತರಾಗಬಹುದಾದ ಕಠಿಣ ಕಾನೂನು ಇದಾಗಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳ ವಿರುದ್ಧದ ಪ್ರಕರಣ
ಶಿವಕುಮಾರ್ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಿ ದಾಖಲೆ ಕೇಳಿದ್ದರು. ಅವರು ಕೇಳಿದ “ಬೆರಳಚ್ಚು ಪುಸ್ತಕ ಲಭ್ಯವಿಲ್ಲ” ಎಂಬ ಉತ್ತರ ಸಿಕ್ಕಿತು. ಈ ಸಂಬಂಧ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಿದರು. (ಕಮಾಆ 11070 ಎಪಿಎಲ್ 2014) ಇದರ ವಿಚಾರಣೆ ನಡೆಸಿದ ಆಯೋಗ ಬೆರಳಚ್ಚು ಪುಸ್ತಕ ಕಾಣೆಯಾಗಿರುವುದಕ್ಕೆ ಎಂಟು ಅಧಿಕಾರಿಗಳನ್ನು ಹೊಣೆಯಾಗಿಸಿ ಆದೇಶ ಕೊಟ್ಟಿದೆ. ಆಯೋಗದ ಆಯುಕ್ತ ಕೃಷ್ಣಮೂರ್ತಿಯವರ ನಿರ್ದೇಶನದಂತೆ ರಾಜ್ಯದಲ್ಲಿ ಬಹುಶಃ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ಬಿದ್ದಿದೆ. ಈ ಪ್ರಕರಣ ಮುಂದುವರಿಯುತ್ತಿದೆ.
ನೀವು ಕೇಳಿರುವ ದಾಖಲೆ ಲಭ್ಯವಿಲ್ಲ ಎಂದರೇನು ಮಾಡಬೇಕು?
ಯಾವುದೇ ಸರ್ಕಾರಿ ದಾಖಲೆಗಳನ್ನು ಬಯಸಿ (ಉದಾಹರಣೆ: ಮ್ಯುಟೇಷನ್, 5/6 ದಾಖಲೆ, ಕೈ ಬರಹದ ಪಹಣಿ, ದರಕಾಸ್ತು ಕಡತಗಳು, ಹಳೇ ಪಹಣಿ ಪುಸ್ತಕಗಳು, ಜನನ ಮರಣ ರಿಜಿಸ್ಟ್ರಾರ್ ಇತ್ಯಾದಿ..) ಮಾಹಿತಿ ಹಕ್ಕಿನ ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳಿಗೆ “ದಾಖಲೆ ಲಭ್ಯವಿಲ್ಲ” ಎಂದು ಹಿಂಬರಹ ನೀಡಿದ್ದರೆ ಅಥವಾ ನೀಡಿದರೆ ಹಾಳೆಯಲ್ಲಿ ಸಂಬಂಧಪಟ್ಟ ಕಛೇರಿಯ ಮುಖ್ಯಸ್ಥರಿಗೆ ಪತ್ರ ಬರೆದು ಲಭ್ಯವಿಲ್ಲದ ಅಥವಾ ಕಳುವಾಗಿದೆ ಎನ್ನಲಾದ ಸರ್ಕಾರಿ ದಾಖಲೆಗಳನ್ನು ಪತ್ತೆ ಮಾಡಲು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 ರೀತ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪತ್ರ ಬರೆಯಿರಿ ಅದಾಗ್ಯೂ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕಿರುತ್ತದೆ.