ನಕಲಿ ವೈದ್ಯರ ತಡೆಗೆ ಕಾನೂನು ಮೂಗುದಾರ; ನಕಲಿ ವೈದ್ಯರ ಹಾವಳಿ ಒಂದು ಸಾಮಾಜಿಕ ಪಿಡುಗು

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಕಲಿ ವೈದ್ಯರ ಹಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ನಾಯಿಕೊಡೆಗಳಂತೆ ಅಲ್ಲಲ್ಲಿ ಅನಧಿಕೃತ ಕ್ಲಿನಿಕ್ ಗಳು ತಲೆ ಎತ್ತಿ ನಿಂತು ಮೆಡಿಕಲ್ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇಂತಹ ವೈದ್ಯರ ಎಡವಟ್ಟುಗಳಿಂದ ಹಲವರ ಜೀವವೂ ಹಾರಿ ಹೋಗಿದೆ. ಆಯುರ್ವೇದಿಕ್ ಲೈಸೆನ್ಸ್ ಪಡೆದು ಇತರ ಔಷಧಿಗಳನ್ನು ನೀಡುವ ವೈದ್ಯರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು ಅಧಿನಿಯಮ 2017 ರ ಸೆಕ್ಷನ್(5) ರ ಅನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ, ವೈದ್ಯಕೀಯ ಸಂಸ್ಥೆಗಳು ಕೆ.ಪಿ.ಎಂ.ಪಿ ಅಡಿಯಲ್ಲಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ.

ಕೆಪಿಎಂಇ ತಿದ್ದುಪಡಿ ಅಧಿನಿಯಮ 2017 ರ ಸೆಕ್ಷನ್ 19 ಅನ್ನು ಈ ಕೆಳಗಿನಂತೆ ಓದಲಾಗಿದೆ: ಯಾವೊಬ್ಬ ವ್ಯಕ್ತಿಯು 7 ನೇ ಪ್ರಕರಣದ ಅಡಿಯಲ್ಲಿ ಮಂಜೂರು ಮಾಡಲಾಗುವ ನೋಂದಣಿ ಇಲ್ಲದ ಒಂದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಿದ್ದಲ್ಲಿ , ನಡೆಸುತ್ತಿದ್ದಲ್ಲಿ ಅಥವಾ ನಿರ್ವಹಿಸುತ್ತಿದ್ದಲ್ಲಿ ಅವನು ಅಪರಾಧ ನಿರ್ಣಯವಾದ ನಂತರ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸ ಶಿಕ್ಷೆಯಿಂದ ಮತ್ತು ಒಂದು ಲಕ್ಷ ರೂಪಾಯಿಗಳ ವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡನೀಯನಾಗತಕ್ಕದ್ದು.

ನಕಲಿ ವೈದ್ಯರ ಹಾವಳಿ ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇದನ್ನು ತಡೆಯಲು ಕಾನೂನಿನ ಮೂಗುದಾರ ಬೇಕೆಬೇಕು. ಅಂದಾಗ ಮಾತ್ರ ನಕಲಿ ವೈದ್ಯ ಎನ್ನುವ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವಾಗದಿದ್ದರೂ, ಅದನ್ನು ಬಹುತೇಕ ತಡೆಯುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರಕ್ಕೆ ಹಾಗೂ ಆಯುಷ್ಯ ಇಲಾಖೆಗೆ ಸಾಧ್ಯವಾಗುತ್ತದೆ.
ನಕಲಿ ವೈದ್ಯರ ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಹಿಂದುಳಿದ ದೊಡ್ಡ ದೊಡ್ಡ ದೇಶಗಳಲ್ಲೂ ಇಂತಹ ಸಮಸ್ಯೆ ಇದ್ದೇ ಇದೆ. ದೇಶದಲ್ಲಿ ಅನಾದಿ ಕಾಲದಿಂದಲೂ ನಕಲಿ ವೈದ್ಯರ ಹಾವಳಿ ಇದ್ದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ. ನಕಲಿ ವೈದ್ಯರನ್ನು ತಡೆಯಲು ಆಯುಷ್ ಇಲಾಖೆಗೆ ವಹಿಸಿಕೊಟ್ಟಿದ್ದರೂ, ದಾಳಿಯ ಮೂಲಕ ನಕಲಿ ವೈದ್ಯರ ಸಮಸ್ಯೆಗೆ ಸಂಪೂರ್ಣ ಬ್ರೇಕ್ ಹಾಕಲು ಸಾಧ್ಯವಿಲ್ಲ. ಗ್ರಾಮೀಣ ಮಟ್ಟದಲ್ಲಿ ವ್ಯಾಪಕವಾಗಿರುವ ಇಂತಹ ದಂಧೆಗೆ ಪ್ರಬಲ ಕಾನೂನಿನ ಅಸ್ತ್ರ ಬೇಕಾಗಿದೆ.

ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗಿ ಕಂಡುಬರುವ ನಕಲಿ ವೈದ್ಯರ ಬಗ್ಗೆ ಅಲ್ಲಿನ ಜನರಿಗೆ ಬಲು ನಂಬಿಕೆ. “ಇಲ್ಲ ಸ್ವಾಮಿ, ಇವರು ಗುಳಿಗೆ ಕೊಟ್ಟರೆ ನಮಗೆ ರೋಗ ವಾಸಿಯಾಗುತ್ತದೆ” ಎಂದು ಹೇಳುತ್ತಾರೆ. ಅದು ಸತ್ಯವಾದರೂ ಶೇ. 80ರಷ್ಟು ನೆಗಡಿ, ಕೆಮ್ಮ, ಜ್ವರ, ತಲೆನೋವುಗಳು ಸಹಜವಾಗಿಯೇ ವಾಸಿಯಾಗುವ ಕಾಯಿಲೆಗಳು. ಇಂತಹ ಕಾಯಿಲೆಗಳಿಗೆ ಸಾಮಾನ್ಯ ಮಾತ್ರೆಗಳನ್ನು ನೀಡಿದರೆ ಹೋಗುತ್ತವೆ, ನೀಡದಿದ್ದರೂ ಹೋಗುತ್ತವೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಜನರಿಗೆ ನಕಲಿ ವೈದ್ಯರು ಮಾತ್ರೆ ನೀಡಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದರಾಚೆಗಿನ ಅಂದರೆ ಶೇ. 20ರಷ್ಟು ಜ್ವರ, ಕೆಮ್ಮುಗಳ ಹಿಂದೆ ಮಾರಕ ಕಾಯಿಲೆಗಳು ಅಡಗಿದ್ದರೆ, ನಕಲಿ ವೈದ್ಯರಿಗೆ ಅವುಗಳನ್ನು ಗುರುತಿಸಲು ಅಸಾಧ್ಯ, ಇದು ಪ್ರಾಣಕ್ಕೆ ಅಪಾಯವಾದರೆ, ಅಮಾಯಕರ ಪ್ರಾಣಕ್ಕೆ ಸಂಚಕಾರ ಬಂದರೆ ಯಾರು ಹೊಣೆ? ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿದಾಗ ರೋಗಿಯನ್ನು ರಕ್ಷಣೆ ಮಾಡಲು ನಕಲಿ ವೈದ್ಯರಿಂದ ಸಾಧ್ಯವಾಗುವುದೇ ಇಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ನಕಲಿ ವೈದ್ಯರನ್ನು ಮೂರು ವಿಧದಲ್ಲಿ ಕಾಣುತ್ತೇವೆ. ಯಾವುದೇ ಪದವಿ ಇಲ್ಲದೇ ವೈದ್ಯರು ಎಂದು ಗುರುತಿಸಿಕೊಂಡಿರುವ ನಕಲಿ ವೈದ್ಯರ ವರ್ಗವೊಂದಿದೆ. ವಿವಿಧ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡಿದವರು, ವೈದ್ಯರ ಹತ್ತಿರ ಸಹಾಯಕರಾಗಿ ಕೆಲಸ ಮಾಡಿದವರು, ತಂದೆ-ತಾಯಿಗಳು ವೈದ್ಯರಾಗಿದ್ದು, ಅವರ ಮಕ್ಕಳು ವೈದ್ಯ ಪದವಿ ಪಡೆಯದಿದ್ದರೂ ವೈದ್ಯ ವೃತ್ತಿ ನಡೆಸುವವರು, ವೈದ್ಯರು ರೋಗಿಗಳಿಗೆ ನೀಡುವ ಔಷಧಿಯನ್ನು ಬಹಳ ವರ್ಷಗಳ ಕಾಲ ಅವರ ಹತ್ತಿರ ಇದ್ದು ನೋಡಿದವರು, ಈ ವರ್ಗದಲ್ಲಿ ಸೇರಿರುತ್ತಾರೆ. ಇವರಿಗೆ ಯಾವುದೇ ಪದವಿಗಳಿರುವುದಿಲ್ಲ, ಆದರೂ ಜನಸಾಮಾನ್ಯರಿಗೆ ವೈದ್ಯರ ರೂಪದಲ್ಲೇ ಕಾಣುತ್ತಾರೆ. ಇವರೆಲ್ಲಾ ವೈದ್ಯಕೀಯ ವಿಜ್ಞಾನವನ್ನು ಸಾಮಾನ್ಯ ವಿಜ್ಞಾನ ಎಂದು ಅರಿತಿರುತ್ತಾರೆ. ವೈದ್ಯಕೀಯ ಲೋಕದ ಒಳ ಹೊರವುಗಳು ಗಂಧ ಗಾಳಿ ಇರುವುದಿಲ್ಲ. ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಕೆಳಹಂತದಲ್ಲಿ ತಾವು ಮಾಡಿರುವ ಅಲ್ಪ ವೃತ್ತಿಯ ಅನುಭವದ ಆಧಾರದ ಮೇಲೆ ವೈದ್ಯರೆಂದು ಕರೆಸಿಕೊಂಡಿದ್ದಾರೆ. ಇಂತಹವರಿಗೆ ರೋಗಿ ಏನು ತಾನೆ ನಿರೀಕ್ಷಿಸುತ್ತಾನೆ, ಆದರೂ ಅದೆಷ್ಟೋ ಗ್ರಾಮೀಣ ಪ್ರದೇಶದಲ್ಲಿ ಇವರೆ ಪರಿಣಿತ ವೈದ್ಯರೆಂದು ಕರೆಸಿಕೊಂಡಿದ್ದಾರೆ. ಜನಸಾಮಾನ್ಯರಲ್ಲಿರುವ ಅರಿವಿನ ಕೊರತೆಯನ್ನೇ ನಕಲಿ ವೈದ್ಯರು ಬಂಡವಾಳವಾಗಿ ಮಾಡಿಕೊಂಡಿದ್ದಾರೆ.

ಇನ್ನು ಎರಡನೇ ವಿಧದಲ್ಲಿ ನಕಲಿ ಪದವಿ ಪಡೆದ ನಕಲಿ ವೈದ್ಯರು. ಇಂಟಿಗ್ರೇಟೆಡ್ ಮೆಡಿಸಿನ್ ಹೆಸರಿನಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. 1970ರ ದಶಕದಲ್ಲಿ ಕೋಲ್ಕತಾ ಸೇರಿದಂತೆ ಇತರ ಕಡೆಗಳಲ್ಲಿ ನಕಲಿ ವೈದ್ಯ ಪದವಿಯ ಸರ್ಟಿಫಿಕೇಟ್ ನೀಡುವ ದಂಧೆಯಿಂದಾಗಿ ಅದೆಷ್ಟೋ ವೈದ್ಯರು ನಕಲಿ ಪದವಿಯ ಸರ್ಟಿಫಿಕೇಟ್‌ನೊಂದಿಗೆ ತಮ್ಮ ಗೇಣು ಹೊಟ್ಟೆ ತುಂಬಿಸಿಕೊಳ್ಳಲು, ಜನಸಾಮಾನ್ಯರ ಪ್ರಾಣದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಆಟವಾಡಲು ಹೊರಟಿದ್ದಾರೆ. ದೇಶದಲ್ಲಿ ಇಲ್ಲದ ಡಿಗ್ರಿಗಳಾದ ಅಲ್ಟ್ರನೇಟಿವ್ ಸಿಸ್ಟಮ್ ಆಫ್ ಮೆಡಿಸನ್, ಎಲೆಕ್ಟ್ರೋ ಹೋಮಿಯೋಪತಿ, ಇಂಡೋ ಅಲೋಪತಿ ಎಂಬ ಡಿಗ್ರಿಯ ಬೋರ್ಡ್‌ಗಳನ್ನು ಹಾಕಿಕೊಂಡು ನಕಲಿ ವೈದ್ಯ ದಂಧೆಗೆ ಮುಂದಾಗುತ್ತಿದ್ದಾರೆ. ದೇಶದಲ್ಲಿ ಇಂತಹ ಡಿಗ್ರಿಗಳು ಇಲ್ಲದಿದ್ದರೂ, ನಕಲಿ ವೈದ್ಯರ ವೃತ್ತಿ ಮೇಲೆ ಇಂತಹ ಹೆಸರಿನ ಬೋರ್ಡ್‌ಗಳು ನೇತಾಡುತ್ತಿರುತ್ತವೆ.

ಮೂರನೇ ವರ್ಗವೇ ಕ್ರಾಸ್ ಪ್ರಾಕ್ಟಿಸರ್ಸ್. ಇವರನ್ನು ನಕಲಿ ವೈದ್ಯರೆಂದು ಕರೆಯುವುದಕ್ಕೆ ಆಗುವುದಿಲ್ಲ. ಇವರು ಹೋಮಿಯೋಪತಿ ಪ್ರಾಕ್ಟಿಸ್ ಮಾಡಿ, ಅಲೋಪತಿ ನೀಡುವುದು, ಆಯುರ್ವೇದಿಕ್ ಕಲಿತು ಆಲೋಪತಿ ನೀಡುವುದನ್ನು ಮಾಡುತ್ತಾರೆ. ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ವರ್ಗದ ಸಮಸ್ಯೆ ಎದುರಾಗುತ್ತದೆ. ಇವರಿಗೆ ಅಲೋಪತಿ ಸೇರಿದಂತೆ ಇತರ ವಿಷಯದಲ್ಲಿ ಪರಿಣತಿ ಹೊಂದುವಂತೆ ಮಾಡಿ, ಇವರಿಗೆ ವೈದ್ಯರೆಂದು ಪರಿಗಣಿಸುವ ಚಿಂತನೆ ರಾಜ್ಯ ಸರ್ಕಾರಕ್ಕೆ ಇದೆ ಎಂಬ ಮಾತಿದೆ. ಇವರು ಕಲಿತಿರುವುದು ಒಂದು ಕೋರ್ಸ್ ಪ್ರಾಕ್ಟೀಸ್ ಮಾಡುವುದು ಮತ್ತೊಂದು.
ಗ್ರಾಮೀಣ ಪ್ರದೇಶದಲ್ಲಿ ಹರುಕು- ಮುರುಕು ವೈದ್ಯಕೀಯ ಜ್ಞಾನದೊಂದಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಆರ್‌ಎಂಪಿ (ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್) ಎಂದು ಗ್ರಾಮೀಣ ಜನರು ಭಾವಿಸುತ್ತಾರೆ.
Indian Medical Board(Alternative Systems) ನಿಂದ ಮಾನ್ಯತೆ ಪಡೆದವರು ಮಾತ್ರ ಆರ್‌ಎಂಪಿ ವೈದ್ಯರಾಗುತ್ತಾರೆ. ಇಂತಹವರು ಕೆಪಿಎಂಎ ಕಾಯ್ದೆ ಪ್ರಕಾರ ನೋಂದಣಿ ಆಗಿರುವುದಿಲ್ಲ, ಆದರೂ ಅವರೆಲ್ಲ ಗ್ರಾಮೀಣ ಪ್ರದೇಶದಲ್ಲಿ ವೈದ್ಯರೆಂದು ಕರೆಸಿಕೊಂಡು, ಜನಸಾಮಾನ್ಯರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ವೈದ್ಯಕೀಯ ಜ್ಞಾನ ಸಾಮಾನ್ಯ ಜ್ಞಾನವಲ್ಲ, ಅದೊಂದು ಸೂಕ್ಷ್ಮ ವಿಜ್ಞಾನ. ಪದವಿ, ತರಬೇತಿಗಳಿಲ್ಲದೆ ಕೇವಲ ನೋಡಿದ, ಕೇಳಿ ತಿಳಿದ, ಅಲ್ಪಕಾಲದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್, ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡಿದ ಸೇವೆಯೇ ಇವರಿಗೆ ವೈದ್ಯಕೀಯದ ಅನುಭವ, ಇವರ ಸರ್ಟಿಫಿಕೆಟ್ ಆಗಿರುತ್ತದೆ. ಇಂತಹ ಸರ್ಟಿಫಿಕೆಟ್ ಜನಸಾಮಾನ್ಯರ ಪ್ರಾಣಕ್ಕೆ ಗೇಟ್‌ಪಾಸ್ ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಈ ನಕಲಿ ವೈದ್ಯರು ಅತಿ ವಿರಳವಾಗಿ ಅಸಲಿ ವೈದ್ಯರೊಂದಿಗೆ ಗುಪ್ತ ಮೈತ್ರಿ ಹೊಂದಿರುತ್ತಾರೆ ಎಂಬ ಮಾತಿದೆ. ಅಸಲಿ ವೈದ್ಯರಿಗೆ ನಕಲಿ ವೈದ್ಯರು ರೋಗಿಯನ್ನು ತಂದುಕೊಟ್ಟರೆ ಇಂತಿಷ್ಟು ಕಮಿಷನ್ ನೀಡುವ ದಂಧೆ ವೈದ್ಯ ಲೋಕದಲ್ಲಿ ನಡೆಯುತ್ತಿದೆ. ಬಡ ಜನರ ರೋಗವು ನಕಲಿ ವೈದ್ಯರಿಗೆ ಆದಾಯದ ಮೂಲವಾಗಿರುವುದು ಮಾತ್ರ ದುರಂತವೇ ಸರಿ. ಇಂತಹವರ ದಂಧೆ ತಡೆಯಲು ಕೇವಲ ಆಯುಷ್ ಇಲಾಖೆಯ ದಾಳಿಯೇ ಪರಿಹಾರವಲ್ಲ. ಇದಕ್ಕಾಗಿ ಕಾಯ್ದೆಯ ಅಂಕುಶ ಬೇಕಾಗಿದೆ.

ಹಾಗಾಗೇ ಇಂದು ವೈದ್ಯರ ಗಣತಿಯ ಅತ್ಯಂತ ಅಗತ್ಯವಾಗಿದೆ. ವೈದ್ಯರ ಗಣತಿ ಮಾಡಿದ ಮೇಲೆ, ಇರುವ ಅಸಲಿ ವೈದ್ಯರೆಷ್ಟು, ನಕಲಿ ವೈದ್ಯರೆಷ್ಟೆಂಬ ಮಾಹಿತಿ ಸಿಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ನೋಟಿಸ್ ನೀಡಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರೆ, ತನ್ನಿಂದ ತಾನೇ ನಕಲಿ ವೈದ್ಯರ ಪಟ್ಟಿ ಸರ್ಕಾರದ ಕೈ ಸೇರುತ್ತದೆ. ನಿರ್ದಿಷ್ಟ ಕಾಯ್ದೆ ಇದ್ದರೆ ಮಾತ್ರ ಅವರಿಗೆ ಕಾನೂನಿನ ಅಡಿಯಲ್ಲಿ ಪರಿಣಾಮಕಾರಿಯಾಗಿ ಶಿಕ್ಷೆ, ದಂಡ ವಿಧಿಸಿ, ನಕಲಿ ವೈದ್ಯ ದಂಧೆಯನ್ನು ತಹಬದಿಗೆ ತರಲು ಸಾಧ್ಯ.