ಮುಂಬರುವ ಲೋಕಸಭಾ ಚುನಾವಣೆಗೆ ಮಂಗಳೂರು ಲೋಕ ಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೇಸ್ ಸರ್ವೆ ಕಾರ್ಯ ಆರಂಭಿಸಿದ್ದು, ಕಾಂಗ್ರೇಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಸಚಿವ ಮಧುಬಂಗಾರಪ್ಪ ಮಂಗಳೂರಿಗೆ ಆಗಮಿಸಿ ಸಭೆಗಳನ್ನು ನಡೆಸಿದ್ದರು.
ಅಭಿಪ್ರಾಯ ಸಂಗ್ರಹಣೆಗಾಗಿ ಬಂದ ಮಧು ಬಂಗಾರಪ್ಪ ಮುಂದೆ ಮಂಗಳೂರಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಹೆಸರನ್ನು ಕೆಲವರು ಸೂಚಿಸಿದ್ದಾರೆ ಎಂಬ ವಿಚಾರ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ. ಇನ್ನುಳಿದಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಇನಾಯತ್ ಆಲಿ ಪರ ಕಾಂಗ್ರೆಸ್ ಮುಂಚೂಣಿ ಘಟಕದ ನಾಯಕರಿಂದ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸುಮಾರು ಮಧ್ಯ ರಾತ್ರಿ 12 ಗಂಟೆವರೆಗೂ ಮಧು ಬಂಗಾರಪ್ಪ ಅವರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ವಿವಿಧ ಬ್ಲಾಕ್ ಗಳ ಮುಂಚೂಣಿ ನಾಯಕರಗಳಿಂದ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಈ ಬಾರಿ ಅಲ್ಪಸಂಖ್ಯಾತ ಮುಸ್ಲಿಂ ವರ್ಗಕ್ಕೆ ಟಿಕೆಟ್ ನೀಡಬೇಕು ಅನ್ನುವ ಕೂಗು ಒಂದೆಡೆ ಬಹಳ ಜೋರಾಗಿ ಕೇಳಿ ಬರುತ್ತಿದ್ದು, ಹೈಕಮಾಂಡ್ ಮುಸ್ಲಿಂ ಸಮುದಾಯಕ್ಕೆ ಟಿಕೇಟ್ ನೀಡುವುದಿದ್ದರೆ ಇನಾಯತ್ ಅಲಿ ಪರ್ಫೆಕ್ಟ್ ಕ್ಯಾಂಡಿಡೇಟ್ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವಧರ್ಮದ ಯುವಕರ ದಂಡೇ ಇನಾಯತ್ ಅಲಿ ಬೆನ್ನಿಗೆ ನಿಲ್ಲುತ್ತದೆ. ಸಮುದಾಯದ ಬೆಂಬಲವೂ ಇದೆ.
ಇನ್ನು ಉಳಿದ ಅಭ್ಯರ್ಥಿಗಳು ರೇಸಿನಲ್ಲಿ ಇದ್ದರೂ ಪಕ್ಷಕ್ಕೆ ಅವರ ಕೊಡುಗೆ ಏನು.? ಎಷ್ಟು ಮಂದಿ ನಾಯಕರನ್ನು ಬೆಳೆಸಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ಮೂವತ್ತು-ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ ಅನ್ನುವ ಕೆಲವು ಜಿಲ್ಲಾ ನಾಯಕರು ತಮ್ಮ ಕ್ಷೇತ್ರದಲ್ಲಿ ಎಷ್ಟು ಯುವ ನಾಯಕರನ್ನು ಸೃಷ್ಟಿಸಿದ್ದಾರೆ, ವೈಯಕ್ತಿಕ ವರ್ಚಸ್ಸು ಉಳಿಸಿಕೊಂಡಿದ್ದಾರೆ ಎಂಬುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಕಳೆದ 40-45 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಪ್ರಭಾವಿ ಸಚಿವರಾಗಿ ವಿವಿದ ಹುದ್ದೆಯನ್ನು ಅಲಂಕರಿಸಿ ಕೆಲಸ ಮಾಡಿದ ಮಾಜಿ ಸಚಿವರು ತಮ್ಮ ಕ್ಷೇತ್ರದಲ್ಲಿ ಯುವ ನಾಯಕರು ಬೆಳೆಸಿದರೆ ತಮ್ಮ ಕುರ್ಚಿಗೆ ಕಂಟಕವಾಗಬಹುದು ಎಂಬುದನ್ನು ಅರಿತು ಮೊಳಕೆಯಲ್ಲೇ ಚಿವುಟಿ ಹಾಕಿದ್ದೇ ಹೆಚ್ಚು.!
ಕರಾವಳಿಯಾದ್ಯಂತ ತನ್ನ ಸಮಾಜ ಸೇವೆ, ಕಾರುಣ್ಯ ಸೇವೆಯಿಂದಲೇ ಪರಿಚಿತರಾದ ಇನಾಯತ್ ಅಲಿ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಸಂಕಲ್ಪವನ್ನು ಮೈಗೂಡಿಸಿ ಬಂದು NSUI ನ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿ ದೇಶದಲ್ಲೆಡೆ ಚಿರಪರಿಚಿತರಾಗಿ,ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಆಪ್ತರಾಗಿ ತಳ ಮಟ್ಟದ ಕಾರ್ಯಕರ್ತರ ಸ್ನೇಹ ಜೀವಿಯಾಗಿ,ಎಲ್ಲರೊಂದಿಗೂ ಪಕ್ಷಾತೀತವಾಗಿ ಸ್ನೇಹ ಬೆಳೆಸಿಕೊಂಡ ಅಪರೂಪದ ವ್ಯಕ್ತಿ. ಕೋವಿಡ್ ಕಾಲದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಪ್ರತಿ ನಾಗರಿಕರ ಅಹವಾಲು ಪಡೆದು ಕಷ್ಟ ಕಾಲದಲ್ಲಿ ಜನರೊಂದಿಗೆ ಬೆರೆದು ನೆರವಾಗಿದ್ದಾರೆ. ಅದೆಷ್ಟೊ ಬಡವರ, ನಿರ್ಗತಿಕರ,ದೀನ ದಲಿತರ, ಕಣ್ಣೀರೊರೆಸಲು ಪಣತೊಟ್ಟ, ಓರ್ವ ಅಪ್ಪಟ ಜನ ಸೇವಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಟಿಕೆಟ್ ಸಿಕ್ಕರೂ ಗರಿಷ್ಠ ಮತ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ.
ತನ್ನ ರಾಜಕೀಯ ಜೀವನದಲ್ಲಿ ಜಾತಿ-ಧರ್ಮ,ಮತ-ಬೇಧ ಮರೆತು ಸಮಾಜದ ಪ್ರತಿಯೊಬ್ಬ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಕ್ರೀಯಾಶೀಲ, ನಗು ಮುಖದ ಯುವ ನಾಯಕ. ನಿತ್ಯ ನಿರಂತರವಾಗಿ ಸಾಮಾಜಿಕ ಸಾಮರಸ್ಯ ನೆಲೆಗೊಳ್ಳಲು, ಜಾತ್ಯತೀತ ಸಿದ್ಧಾಂತ ಭದ್ರಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಇನಾಯತ್ ಪರ ಅಲೆ ಜೋರಾಗಿ ಬೀಸುತ್ತಿದ್ದು ಮುಂದಿನ ಲೋಕ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿ ಎಂದು ದ.ಕ ಜಿಲ್ಲೆಯ ಸರ್ವಧರ್ಮಿಯರು ಅವರ ಬೆನ್ನಿಗೆ ನಿಂತಿದ್ದಾರೆ. ಕ್ಷೇತ್ರದಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಪಾಳಯದಲ್ಲೂ ಹೊಸ ಗರಿ ಮೂಡಲಿದೆ.ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ನ್ನು ಮೇಲೆತ್ತಲು ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಇನಾಯತ್ ಹೆಸರು ತೇಲಿ ಬಂದದ್ದೇ ತಡ ಹೊಸ ಉತ್ಸಾಹದಲ್ಲಿದ್ದಾರೆ. ಇನಾಯತ್ ಅಲಿ ಒಬ್ಬರು ಯಶಸ್ವಿ ಉದ್ಯಮಿಯಾಗಿದ್ದರೂ ಶ್ರೀಮಂತ ಬಡವರು ಅನ್ನದೆ ಎಲ್ಲರೊಂದಿಗೂ ಅತ್ಯಂತ ಆತ್ಮೀಯವಾಗಿ ಬೆರೆಯುವ ಅವರ ಸರಳತೆ ಎಲ್ಲರನ್ನೂ ಆಕರ್ಷಿಸುತ್ತಿದೆ.