ಕಾಂಗ್ರೆಸ್ ಸೋಲಿಸಬೇಕಾಗಿರುವುದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ದಯನೀಯವಾಗಿ ಸೋಲುವುದರೊಂದಿಗೆ ಕಾಂಗ್ರೆಸ್ INDIA ಮೈತ್ರಿ ಕೂಟವನ್ನು ಸೋಲಿಸುವುದರೊಂದಿಗೆ ಬಿಜೆಪಿ ವಿರುದ್ಧದ ಪ್ರತಿಪಕ್ಷಗಳ ಹೋರಾಟಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ. ಬಿಜೆಪಿಯೇತರ ಪಕ್ಷಗಳನ್ನು ಸೋಲಿಸುವಲ್ಲಿ ಕಾಂಗ್ರೆಸ್ಸಿಗಿರುವ ಉತ್ಸಾಹ ಬಿಜೆಪಿಯನ್ನು ಸೋಲಿಸುವಲ್ಲಿ ಇಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ2 ರ ವೈಫಲ್ಯಗಳೇ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ಸರಕಾರ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಜನರು ಸಂಕಷ್ಟ ಅನುಭವಿಸಬೇಕಾಯಿತು, ಸಂವಿಧಾನ ಅಪಾಯದಲ್ಲಿದೆ. ಇದಕ್ಕೆಲ್ಲ ನೇರ ಕಾರಣ ಕಾಂಗ್ರಸ್ ಪಕ್ಷವೇ ಆಗಿರುತ್ತದೆ.
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ಇಳಿಸಲು ಒಂದುಗೂಡಿರುವ ವಿರೋಧ ಪಕ್ಷಗಳ ಮೈತ್ರಿಕೂಟINDIA, ಐದು ರಾಜ್ಯಗಳ ಚುನಾವಣೆ ತಮಗೆ ‘ಬೂಸ್ಟ್’ ನೀಡಲಿದೆ ಎಂದು ಭಾವಿಸಿದ್ದವು. ಆದರೆ ಈ ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಕಾಂಗ್ರೆಸ್‌ನ ಅತ್ಯಂತ ಕಳಪೆ ಪ್ರದರ್ಶನ, ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಮಿತ್ರ ಪಕ್ಷಗಳ ಮುಖಂಡರು ಈಗಾಗಲೇ ತಮ್ಮ ಅಸಮಾಧಾನ, ಕಹಿಯನ್ನು ಹೊರಹಾಕಿದ್ದಾರೆ. ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆ ದಿಕ್ಸೂಚಿ ಎನ್ನುವುದಕ್ಕಿಂತಲೂ, INDIA ಮೈತ್ರಿಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ಸಿನ ಭವಿಷ್ಯದ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ವಿರುದ್ಧದ ‘ಸಮಾನ ಮನಸ್ಕ’ ವಿರೋಧ ಪಕ್ಷಗಳನ್ನು ಒಂದು ವೇದಿಕೆಯಲ್ಲಿ ಸೇರಿಸುವುದು ಮತ್ತು ಈ ಮೂಲಕ ಲೋಕಸಭೆ ಚುನಾವಣೆಗೆ ಶಕ್ತಿಶಾಲಿ ಮೈತ್ರಿಕೂಟವನ್ನು ರಚಿಸುವುದು ಕೆಲವು ಪಕ್ಷಗಳ ಗುರಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಜತೆಗೆ, ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿದ್ದವು. ಆದರೆ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಸಂಬಂಧಿಸಿದಂತೆ ವಿವಿಧ ನಾಯಕರು ಆಗಾಗ್ಗೆ ಅಪಸ್ವರ ಎತ್ತುತ್ತಿದ್ದರು. ಅದಕ್ಕೆ ಈಗ ಚುನಾವಣೆಯಲ್ಲಿನ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ದುರಂಹಕಾರ, ಸಂವಹನ ಕೊರತೆ, ಟಿಕೇಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ, ಬಿಜೆಪಿ ಮುಖಂಡರೊಂದಿಗೆ ಅಡ್ಜಸ್ಟ್ ಮೆಂಟ್ ರಾಜಕೀಯ, ಎದುರಾಳಿಯ ಸಾಮರ್ಥ್ಯವನ್ನು ತಿಳಿದುಕೊಳ್ಳಲು ವಿಫಲವಾಗಿರುವುದು ಕಾಂಗ್ರೆಸ್ ಹೀನಾಯವಾಗಿ ಸೋಲಲು ಕಾರಣವಾಯಿತು. ಕಾಂಗ್ರೆಸ್ ಸೋಲು ಅನಿರೀಕ್ಷಿತವೇನು ಅಲ್ಲ. ಮಿತಿ ಮೀರಿದ ಭಿನ್ನಮತ, ಗುಂಪುಗಾರಿಕೆ, ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ವಿಫಲ, ಸಣ್ಣಪುಟ್ಟ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳದಿರುವುದು, ಮೈತ್ರಿಕೂಟವನ್ನು ಕಡೆಗಣನೆ ಇದೆಲ್ಲವೂ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾಡುವ ಒಪ್ಪಂದದ ಮಾತುಕತೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರಯತ್ನಿಸಿದ್ದರು. ಆದರೆ ತಮ್ಮ ಬೇಡಿಕೆಗೆ ಕಿಮ್ಮತ್ತು ನೀಡಿಲ್ಲ ಎಂದು ಹರಿಹಾಯ್ದಿದ್ದರು. ಕಾಂಗ್ರೆಸ್‌ನ ನಡೆಯು ಮೈತ್ರಿಕೂಟದ ಇತರೆ ಪಕ್ಷಗಳಲ್ಲಿಯೂ ಅಸಮಾಧಾನ ಮೂಡಿಸಿದೆ. ಕೊನೆಗೆ ಅಖಿಲೇಶ್ ಅವರು 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಇಲ್ಲದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಉತ್ತರದ ರಾಜ್ಯಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ ಕೆಲವು ಸೀಟುಗಳನ್ನು ಬಿಟ್ಟುಕೊಡಲಿಲ್ಲ. ಸಮಾಜವಾಗಿ ಪಾರ್ಟಿ, ಬಹುಜನಸಮಾಜ ಪಾರ್ಟಿಗು ಸ್ಥಾನಗಳನ್ನು ಕಾಂಗ್ರೆಸ್ ನೀಡಿಲ್ಲ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ತಲೆನೋವಾಗಲಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕಿಂತಲು ಹೆಚ್ಚಾಗಿ ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ರಾಜ್ಯಗಳಲ್ಲಿ ಗೆಲ್ಲಲು ಕಾಂಗ್ರೆಸ್ ಹೆಚ್ಚಿನ ಪರಿಶ್ರಮ ವಹಿಸಬೇಕಾಗಿತ್ತು. ಬಿಜೆಪಿಯನ್ನು ಸೋಲಿಸಲೇ ಬೇಕೆಂಬ ಮನಸ್ಥಿಗೆ ಕಾಂಗ್ರೆಸ್ಸಿಗೆ ಎಂದೂ ಕೂಡ ಇರಲಿಲ್ಲ.ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮಬಂಗಾಲ, ಬಿಹಾರ, ಪಂಜಾಬ್, ದೆಹಲಿ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗುವುದರಲ್ಲಿ ಅರ್ಥವೇನು ಇಲ್ಲ. ಕಾಂಗ್ರೆಸ್ ಸೋಲಿಸಬೇಕಾಗಿರುವುದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು.