ಲಕ್ಕಿ ಸ್ಕೀಂ ನಂತಾದ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ

ರಾಜ್ಯ

18 ಸಾವಿರ ಅರ್ಜಿಗಳು, 57 ಮಂದಿ ಫಲಾನುಭವಿಗಳು.! ಸೈಬರ್ ಗಳಲ್ಲಿ ಒಂದೊಂದು ಅರ್ಜಿಗೆ 100 ರೂ. ವಸೂಲಿ, ಹುಚ್ಚು ಮುಂಡೆ ಮದುವೇಳಿ ಉಂಡೋನೆ ಜಾಣ.!

ಇದೀಗ ಜಿಲ್ಲೆಯಾದ್ಯಂತ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಲಕ್ಕಿ ಸ್ಕೀಂ ಬಗ್ಗೆ ನಿಮಗೆ ತಿಳಿದಿದೆ. ಯಾರೋ ಒಬ್ಬರು ಮಾಡಿ ಕೋಟಿಗಟ್ಟಲೆ ದುಡ್ಡು ಸಂಪಾದಿಸಿದ್ದಾರೆ ಎಂದು ಇದೀಗ ವೆರೈಟಿ ವೆರೈಟಿ ಹೆಸರಿನಲ್ಲಿ ನೂರಾರು ಲಕ್ಕಿ ಸ್ಕೀಂ ಗಳು ತಲೆ ಎತ್ತಿದೆ. ಮಾಸಿಕ 1000 ರೂಪಾಯಿಯಂತೆ 20 ತಿಂಗಳು ಕಟ್ಟಬೇಕಿದೆ. ಅದೃಷ್ಟವಂತ ಫಲಾನುಭವಿಗಳಿಗೆ ಮನೆ, ಕಾರು ದೊರಕಲಿದೆ. ಅಂದಾಜು ಐದರಿಂದ ಹತ್ತು ಸಾವಿರ ಜನರು ಈ ಸ್ಕೀಂ ಸದಸ್ಯರಾಗಿರುತ್ತಾರೆ. ಇವರು ಕಟ್ಟಿದ ದುಡ್ಡಿನಿಂದ ಬರೀ 20 ಜನರಿಗೆ ಅದೃಷ್ಟ ಒಲಿಯಲಿದೆ.

ಅದೇ ರೀತಿಯಾಗಿದೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಭರಪೂರ ಅನುದಾನ ಒದಗಿಸಿದ್ದರು. ಆದರೆ ಇದೀಗ ಅಲ್ಪಸಂಖ್ಯಾತ ಮತದಾರರಿಂದಲೇ ರಚಿಸಲ್ಪಟ್ಟ ರಾಜ್ಯ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಿದೆ.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶ್ರಮ ಶಕ್ತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆಹ್ವಾನಿಸಿತ್ತು. ಆದರೆ ಈ ಬಾರಿ ನಮ್ಮದೇ ಸರಕಾರ ಅಸ್ತಿತ್ವಕ್ಕೆ ಬಂದ ಖುಷಿಯಲ್ಲಿ ಗ್ರಾಮ ಗ್ರಾಮಗಳಿಂದಲೂ ಅಲ್ಪಸಂಖ್ಯಾತರು ಅರ್ಜಿಯನ್ನು ಹಾಕಿದ್ದರು.ಶ್ರಮ ಶಕ್ತಿ ಯೋಜನೆಯೊಂದಕ್ಕೆ ಅಂದಾಜು 18,000 ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಆದರೆ ಈ ಯೋಜನೆಯಲ್ಲಿ ರೂಪಾಯಿ 50,000 ದಂತೆ 57 ಜನರಿಗೆ ನೀಡಲು ಮಾತ್ರ ಅಂದರೆ 28 ಲಕ್ಷ ರೂಪಾಯಿ ಮಾತ್ರ ಒಂದೊಂದು ಜಿಲ್ಲೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. 18,000 ಜನರಲ್ಲಿ 57 ಜನರನ್ನು ಆಯ್ಕೆ ಮಾಡುವುದು ಹೇಗೆ ಅನ್ನುವುದು ಈಗ ಇಲಾಖೆಗೆ ತಲೆಬಿಸಿಯಾಗಿದೆ. ಆಯಾಯ ರಾಜಕಾರಣಿಗಳ ಹಿಂಬಾಲಕರು ವಸೂಲಿ ಬಾಜಿ ಮಾಡಿ ಪ್ರಯೋಜನ ಪಡೆದುಕೊಳ್ಳುತ್ತಾರೆ ವಿನಃ ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ಕೇವಲ ಶ್ರಮಶಕ್ತಿ ಯೋಜನೆ ಒಂದರ ಕಥೆಯಲ್ಲ.

ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಟ್ಯಾಕ್ಸ್, ಗೂಡ್ಸ್, ಆಟೋ ರಿಕ್ಷಾ, ಕಾರು ವಾಹನ ಖರೀದಿಗೆ ಸಂಬಂಧಿಸಿದ ಸ್ವಾವಲಂಬಿ ಸಾರಥಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು 2000 ಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಯೋಜನೆ ಅನ್ವಯ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿ ಸಬ್ಸಿಡಿ ದೊರಕಲಿದೆ. ಆದರೆ 20 ಜನರಿಗಷ್ಟೇ ಹಂಚಲು ಅನುದಾನ ಬಿಡುಗಡೆಯಾಗಿದೆ.

1 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲು, ಪಂಪ್ ಸೆಟ್ ಒದಗಿಸಲು 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. 300 ಕ್ಕಿಂತ ಹೆಚ್ಚು ಅರ್ಜಿ ಬಂದಿದ್ದು 50 ರಷ್ಟು ಜನರಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.

ಶೇಕಡಾ 5 ರಷ್ಟು ಫಲಾನುಭವಿಗಳಿಗೆ ಈ ಬಾರಿ ಸರಕಾರದ ಯೋಜನೆಗಳು ತಲುಪುವುದು ಕಷ್ಟ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿದ್ದರೂ ಆಯಾಯ ಜಿಲ್ಲೆಗೆ ಸಮಾನವಾಗಿ ಈ ಬಾರಿ ಅನುದಾನ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಮೂಗಿಗೆ ಬೆಣ್ಣೆ ಸವರಿದೆ. ಈ ಯೋಜನೆ ಅಲ್ಪಸಂಖ್ಯಾತರಿಗೆ ಲಕ್ಕಿ ಸ್ಕೀಂ ನಂತಾಗಿದೆ.

ಇನ್ನು ಈ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುತ್ತದೋ ಅಂದರೆ ಅದೂ ಇಲ್ಲ. ರಾಜಕಾರಣಿಗಳ ಹಿಂಬಾಲಕರು, ಬ್ರೋಕರ್ ಗಳು ತಮಗೆ ಬೇಕಾದ ಫಲಾನುಭವಿಗಳಿಗೆ ನೀಡಲು ಅಧಿಕಾರಿಗಳ ಮೇಲೆ ಒತ್ತಡ ತರುತ್ತಾರೆ. ನೈಜ ಅರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪುವುದೇ ಇಲ್ಲ.

ಈ ಬಾರಿ ಜುಜುಬಿ ಅನುದಾನವನ್ನು ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಅಲ್ಪಸಂಖ್ಯಾತರ ಪರ ಯೋಜನೆಗಳು ಅನ್ನುವ ಜಾಹೀರಾತು ರಾರಾಜಿಸುತ್ತಿದೆ. ಆದರೆ ಅಂಕಿಅಂಶ ನೋಡಿದಾಗ ಮಣ್ಣಾಂಗಟ್ಟಿ ಏನೂ ಇಲ್ಲ. ವೇದಿಕೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹರಿಹಾಯುತ್ತಿದ್ದ ಬಿಜೆಪಿ ಅವಧಿಯಲ್ಲಿ ಹೆಚ್ಚಿನ ಅಲ್ಪಸಂಖ್ಯಾತರಿಗೆ ಈ ಯೋಜನೆ ಲಾಭ ತಂದಿತ್ತು. ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಏನೂ ಇಲ್ಲದಂತಾಗಿದೆ.

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು, ವೃದ್ಧರು ಎನ್ನದೇ ಸೈಬರ್ ಸೆಂಟರ್ ಗಳಿಗೆ ಎಡಕಾಡಿದ್ದೇ ಬಂತು. ಸೈಬರ್ ಸೆಂಟರ್ ಗಳು ಒಂದೊಂದು ಅರ್ಜಿಗೂ ಕನಿಷ್ಠ 100 ರೂಪಾಯಿ ವಸೂಲಿ ಮಾಡಿದ್ದು, ಹುಚ್ಚನ ಮದುವೆಯಲ್ಲಿ ಉಂಡೋಣೆ ಜಾಣ ಅನ್ನುವಂತೆ ಒಳ್ಳೆಯ ಅವಕಾಶ ಎಂದು ಸೈಬರ್ ಸೆಂಟರ್ ಗಳು ಲೂಟಿ ಹೊಡೆದಿದೆ. ಫಲಾನುಭವಿಗಳು ಅಲೆದಾಡಿದ್ದೇ ಬಂತು.