ಹಂಪನಕಟ್ಟೆ, ವಾಮಂಜೂರು, ಮೂಡುಶೆಡ್ಡೆಯಲ್ಲಿ ಅನಧಿಕೃತ ಕ್ಲಿನಿಕ್ ಗೆ ಬೀಗಮುದ್ರೆ. ಗುರುಪುರ ಕೈಕಂಬದಲ್ಲೂ ನಕಲಿ ವೈದ್ಯರು.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಅನಧಿಕೃತ ಕ್ಲಿನಿಕ್, ನಕಲಿ ವೈದ್ಯರ ಮೇಲೆ ಬಿಸಿ ಮುಟ್ಟಿಸುವ ಕೆಲಸ ಆರಂಭವಾಗಿದ್ದು, ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಜಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ, ನೋಂದಾವಣೆಯಾಗದ ಮೂಡುಶೆಡ್ಡೆ, ವಾಮಂಜೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಮತ್ತು ನಗರದ ಹಂಪನಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ಕೊಂದಕ್ಕೆ ಬೀಗಮುದ್ರೆ ಹಾಕಿದ್ದಾರೆ.
ಅದೇ ರೀತಿ ನಗರದ ಬಂದರ್ ಪ್ರದೇಶದ ಮೂಲವ್ಯಾಧಿಗೆ ಸಂಬಂಧಿಸಿದ ಮೂರು ಕ್ಲಿನಿಕ್ ಗಳಿಗೆ ಭೇಟಿ ನೀಡಿದ ತಂಡ ವೈದ್ಯರು ಇಲ್ಲದೆ ವಾಪಾಸ್ ಬಂದ ಘಟನೆ ಕೂಡ ನಡೆದಿದೆ.
ಮಂಗಳೂರು ನಗರ ಗ್ರಾಮ ಪ್ರದೇಶಗಳಲ್ಲಿ ಈಗಾಗಲೇ ಕೆ.ಪಿ.ಎಂ.ಇ.ಎ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದ ಅಲೋಪತಿ ಕ್ಲಿನಿಕ್, ಆಯುಷ್ ಕ್ಲಿನಿಕ್, ಡೆಂಟಲ್ ಕ್ಲಿನಿಕ್, ಜನೆಟಿಕ್ ಲ್ಯಾಬೋರೇಟರಿಗಳು, ಫಿಸಿಯೋಥೆರಪಿ ಸೆಂಟರ್ ಗಳು, ಲ್ಯಾಬ್, ಲ್ಯಾಬ್ ಕಲೆಕ್ಷನ್ ಸೆಂಟರ್ ಗಳು ಹಾಗೂ ಈಗಾಗಲೇ ನೋಂದಾವಣೆಯಾಗಿ ನವೀಕರಣ ಮಾಡಲು ಬಾಕಿ ಇರುವ ಸಂಸ್ಥೆಗಳು ಕಡ್ಡಾಯವಾಗಿ ಒಂದು ವಾರದೊಳಗೆ ನೋಂದಾವಣೆ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯೊಳಗೆ ಸಂಬಂಧಿಸಿದ ಕ್ಲಿನಿಕ್, ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಾವಣೆ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕೆ.ಪಿ.ಎಂ.ಇ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಆದರೆ ಆರೋಗ್ಯ ಇಲಾಖೆಯ ದಾಳಿ ಕೇವಲ ನಗರಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಎಂಬಿಬಿಎಸ್ ಮಾಡದ ಅನೇಕ ವೈದ್ಯರು ಡಾಕ್ಟರ್ ಆಗಿ ಕಾರ್ಯಾಚರಿಸುತ್ತಿದ್ದಾರೆ. ಅದರ ಜೊತೆಗೆ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡಿದವರು, ವೈದ್ಯರ ಸಹಾಯಕರಾಗಿ ಕೆಲಸ ಮಾಡಿದವರು, ನಕಲಿ ಸರ್ಟಿಫಿಕೆಟ್ ಪಡೆದುಕೊಂಡವರು, ಆರ್ ಎಂ ಪಿ ಗಳು ವೈದ್ಯ ಬೋರ್ಡ್ ತಗುಲಾಕಿಕೊಂಡು ಕ್ಲಿನಿಕ್ ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಶೇ 50 ರಷ್ಟು ವೈದ್ಯರು ಇದೇ ಕೆಟಗರಿಗೆ ಸೇರಿರುತ್ತಾರೆ. ಆದರೆ ನೆಗಡಿ, ಕೆಮ್ಮು, ಜ್ವರಕ್ಕೆ ಇವರು ನೀಡುವ ಗುಳಿಗೆಯಿಂದ ವಾಸಿಯಾಗಬಹುದು. ಬೇರೆ ಕಾಯಿಲೆಗಾಗಿ ಮದ್ದಿಗೆ ಬಂದವರು ಇವರ ಹರಕು ಮುರುಕು ವೈದ್ಯ ಜ್ಜಾನದಿಂದಾಗಿ ರೋಗಿಯ ಪ್ರಾಣಕ್ಕೆ ಅಪಾಯವಾದ ಘಟನೆಗಳು ಕೂಡ ನಡೆದಿದೆ. ಆರೋಗ್ಯ ಇಲಾಖೆ ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಗ್ರಾಮಾಂತರ ಪ್ರದೇಶಕ್ಕೂ ದಾಳಿ ನಡೆಸಿ ದಾಖಲೆ ಸಂಗ್ರಹಿಸುವ ಕೆಲಸ ಮಾಡಬೇಕಿದೆ.