ಮೂಲಭೂತವಾದಿ ಗುರು ಪತ್ವಂತ್‌ಸಿಂಗ್‌ ಪನ್ನುನ್ ಹತ್ಯೆ ಪ್ರಕರಣ; FBI ಮುಖ್ಯಸ್ಥ ಮುಂದಿನ ವಾರ ಭಾರತಕ್ಕೆ ಭೇಟಿ

ಅಂತಾರಾಷ್ಟ್ರೀಯ

ಅಮೆರಿಕದ ಫೆಡೆರೆಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ (FBI) ಡೈರೆಕ್ಟರ್‌ ಕ್ರಿಸ್ಟೋಫರ್‌ ವ್ರೇ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಂತ ಭಾರತದ ಅಮೆರಿಕನ್‌ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ. ಅಂದ ಹಾಗೆ ಸಿಖ್‌ ಮೂಲಭೂತವಾದಿ ಗುರು ಪತ್ವಂತ್‌ಸಿಂಗ್‌ ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಅಂತ ಅಮೆರಿಕ ಆರೋಪ ಮಾಡಿದೆ.

ಇದೀಗ ಪನ್ನುನ್‌ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿಕ್ಕೆ ಕ್ರಿಸ್ಟೋಫರ್‌ ಭಾರತಕ್ಕೆ ಬರಲಿದ್ದಾರೆ ಅಂತ ತಿಳಿದು ಬಂದಿದೆ. ಇತ್ತ ಭಾರತ ಕೂಡ ಇದರ ಬಗ್ಗೆ ವಿಚಾರಣೆ ನಡೆಸಲಿಕ್ಕೆ ತನಿಖಾ ತಂಡವನ್ನು ರಚನೆ ಮಾಡಿದೆ ಎನ್ನಲಾಗಿದೆ. ಪನ್ನುನ್‌ ಹತ್ಯೆ ಸಂಚಿನ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್‌ ಸೇರಿದಂತೆ ಹಿರಿಯ ಭಾರತೀಯ ಅಧಿಕಾರಿಗಳ ಜೊತೆ ಈ ವಾರದ ಆರಂಭದಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಜಾನ್‌ ಪೈನರ್ ದೆಹಲಿಯಲ್ಲಿ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೆ ಇದೀಗ ಕ್ರಿಸ್ಟೋಫರ್‌ ವ್ರೇ ಕೂಡ ಭಾರತಕ್ಕೆ ಭೇಟಿ ನೀಡುವ ಕುರಿತು ಗಾರ್ಸೆಟ್ಟಿ ಮಾಹಿತಿ ನೀಡಿದ್ದಾರೆ.