ರಾಜಸ್ಥಾನ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ.. ವಸುಂಧರಾ ರಾಜೇ ಬಣದ ಬಿಜೆಪಿಯ 30 ಶಾಸಕರು ಕಾಂಗ್ರೆಸ್ ನತ್ತ.??

ರಾಷ್ಟ್ರೀಯ

ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ನಮ್ಮದೇ ಹವಾ ಎಂಬುದನ್ನು ಮೋದಿ ನೇತೃತ್ವದ ಬಿಜೆಪಿ ಇದೀಗ ಸಾಬೀತುಪಡಿಸಿದೆ. ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಗೆ ಬಾಗಿಲು ಬಂದ್ ಮಾಡಿದರೂ ಉತ್ತರ ಭಾರತದ ಮತದಾರ ಈಗಲೂ ಬಿಜೆಪಿ, ಮೋದಿಗೆ ಜೈ ಅನ್ನುತ್ತಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡದಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ. ಕಾಂಗ್ರೆಸ್ ಪಕ್ಷ ತೆಲಂಗಾಣ ಗೆದ್ದು ಅಲ್ಲಿ ಸರ್ಕಾರ ಪ್ರತಿಷ್ಠಾಪಿಸಿದೆ. ಆದರೆ ಬಿಜೆಪಿ ಮೂರು ರಾಜ್ಯಗಳನ್ನು ಗೆದ್ದರೂ ಹೊಸ ಸರಕಾರ ಅಸ್ತಿತ್ವಕ್ಕೆ ತರಲು ಹೆಣಗಾಡುತ್ತಿದೆ. ಇದರಲ್ಲಿ ರಾಜಸ್ಥಾನ ಇದೀಗ ಬಿಜೆಪಿ ಹೈಕಮಾಂಡ್ ಗೆ ಕಗ್ಗಂಟಾಗಿದ್ದು, ಸ್ವಲ್ಪ ಎಡವಿದರೂ ಅಲ್ಲಿ ಆಪರೇಷನ್ ಹಸ್ತ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿ ಮಾಡುತ್ತಿದ್ದ ಆಪರೇಷನ್ ಕಮಲ ಇದೀಗ ರಾಜಸ್ಥಾನದಲ್ಲಿ ಬಿಜೆಪಿಗೆ ತಿರುಮಂತ್ರ ಆಗುವ ಸಾಧ್ಯತೆ ಇದೆ. ಬಿಜೆಪಿಯ 30 ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅನ್ನುವ ವಿಚಾರ ಇದೀಗ ಸುದ್ದಿಯಾಗುತ್ತಿದೆ.

ರಾಜಸ್ಥಾನದಲ್ಲಿ ಈ ಮೊದಲು ಕಾಂಗ್ರೆಸ್ ಸರಕಾರವಿತ್ತು. ಅದಕ್ಕಿಂತ ಮೊದಲು ಅಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರವಿತ್ತು. ಕಳೆದ ಬಾರಿ ವಸುಂಧರಾ ರಾಜೇ ಸರಕಾರದ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷವನ್ನು ಅಲ್ಲಿನ ಮತದಾರರು ಅಧಿಕಾರಕ್ಕೆ ತಂದಿದ್ದರು. ಈ ಬಾರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎಕ್ಸಿಟ್ ನೀಡಿದ್ದಾರೆ. ಆದರೆ ಇದೀಗ ರಾಜಸ್ಥಾನದಲ್ಲಿ ಬಿಜೆಪಿಗೆ ದೊಡ್ಡ ತಲೆನೋವಾಗಿರುವುದು ಸಿಎಂ ಆಯ್ಕೆ ವಿಚಾರ. ವಸುಂಧರಾ ರಾಜೇ ಮತ್ತೆ ಸಿಎಂ ಅಭ್ಯರ್ಥಿಯ ಪ್ರಬಲ ದಾವೆದಾರಿಯಾಗಿದ್ದು, ಬಿಜೆಪಿ ಹೈಕಮಾಂಡ್ ವಸುಂಧರಾ ರಾಜೇ ಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಇಷ್ಟವಿಲ್ಲ. ಹೊಸ ಮುಖವನ್ನು ಮುನ್ನೆಲೆಗೆ ತರಲು ಚಿಂತಿಸುತ್ತಿದೆ. ವಸುಂಧರಾ ರಾಜೇ ಗೆ ಮುಖ್ಯಮಂತ್ರಿ ನೀಡದೆ ಇದ್ದರೆ ಅವರ ಪರವಾಗಿರುವ 30 ಶಾಸಕರು ಬಿಜೆಪಿ ತೊರೆಯುವ ಬೆದರಿಕೆ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮುಂದೆ ಶರಣಾಗಿತ್ತು. ಅದೇ ರೀತಿಯ ಪರಿಸ್ಥಿತಿ ಇದೀಗ ರಾಜಸ್ಥಾನದಲ್ಲಿ ಬಿಜೆಪಿಗೆ ಎದುರಾಗಿದೆ. ವಸುಂಧರಾ ರಾಜೇ ಗೆ ಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ 30 ಶಾಸಕರೊಂದಿಗೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ರಾಜಸ್ಥಾನದಲ್ಲಿ ಬಾಲಕನಾಥ್ ಯೋಗಿ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲು ಬಿಜೆಪಿ ಮುಂದಾಗುತ್ತಿದೆ ಅನ್ನುವ ಸುದ್ದಿ ನಿನ್ನೆ ಮಾಧ್ಯಮ, ಸೋಷಿಯಲ್ ಮೀಡಿಯಾಗಳಲ್ಲಿ ಗಳಲ್ಲಿ ಜೋರಾಗಿ ಹರಿದಾಡಿತ್ತು. ಇದರ ಬೆನ್ನಿಗೆ ತಮ್ಮ ಆಪ್ತ 30 ಶಾಸಕರೊಂದಿಗೆ ಗುಪ್ತ ಸಭೆ ನಡೆಸಿರುವ ವಸುಂಧರಾ ರಾಜೇ ನಡೆ ಇದೀಗ ಭಾರೀ ಕುತೂಹಲ ಮೂಡಿಸಿದೆ.

ಇದರ ನಡುವೆ ದೆಹಲಿ ತಲುಪಿರುವ ವಸುಂಧರಾ ರಾಜೆ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ರಾಜಸ್ಥಾನ ಹಾಗೂ ಇತರ ಎರಡು ರಾಜ್ಯಗಳ ಸಿಎಂ ಆಯ್ಕೆಗೆ ಸತತ ಸಭೆ ನಡೆಸುತ್ತಿದೆ. ಇದರ ಬೆನ್ನಲ್ಲೇ ವಸುಂಧರಾ ರಾಜೆಗೆ ಹೈಕಮಾಂಡ್ ಬುಲಾವ್ ನೀಡಿದ್ದಾರೋ ಅಥವಾ ತಾವೇ ಶಕ್ತಿ ಪ್ರದರ್ಶನ ಮಾಡಲು ದೆಹಲಿಗೆ ತೆರಳಿದ್ದಾರೋ ಅನ್ನೋ ಕುರಿತು ಸ್ಪಷ್ಟತೆ ಇಲ್ಲ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಸುಂಧರಾ ರಾಜೆ, ಸೊಸೆಯನ್ನು ನೋಡಲು ದೆಹಲಿಗೆ ಆಗಮಿಸಿದ್ದಾರೆ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.