ಗುಜ್ಜರಕೆರೆಯ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಖರೀದಿಸಿದ ಮಹಿಳೆಯೊಬ್ಬರಿಗೆ ಕಾರು ಪಾರ್ಕಿಂಗ್ ನೀಡದಿರುವ ಪ್ರಕರಣದಲ್ಲಿ ಬಿಲ್ಡರ್ ಗಳಿಗೆ ಜೈಲು ಶಿಕ್ಷೆ ವಿಧಿಸಿ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿತ್ತು. ಇದಕ್ಕೆ ವೇದಿಕೆಯ ಬೆಂಗಳೂರಿನ ರಾಜ್ಯ ಆಯೋಗದಿಂದ ತಡಯಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ.
ಕಾರ್ ಪಾರ್ಕಿಂಗ್ ನೀಡಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಬಿಲ್ಡರ್ ಗಳ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದು, ವೇದಿಕೆ ವಿಚಾರಣೆ ನಡೆಸಿ ದೂರುದಾರರಿಗೆ ಕಾರ್ ಪಾರ್ಕಿಂಗ್ ಗೆ ಜಾಗ ಮತ್ತು 50 ಸಾವಿರ ರೂಪಾಯಿ ಪರಿಹಾರ, ಪ್ರಕರಣದ ಬಾಬ್ತು 10 ಸಾವಿರ ರೂಪಾಯಿ ಖರ್ಚನ್ನು ನೀಡುವಂತೆ ಆದೇಶಿಸಿತ್ತು. ಆದರೆ ಈ ವಿಚಾರದಲ್ಲಿ ವೇದಿಕೆ ಆದೇಶ ಪಾಲನೆ ಮಾಡಿಲ್ಲ ಎಂದು ಮಹಿಳೆ ಮತ್ತೆ ವೇದಿಕೆಗೆ ದೂರು ನೀಡಿದ ಕಾರಣ ಆರೋಪಿಗಳು ಗ್ರಾಹಕ ನ್ಯಾಯಾಲಯ ಆದೇಶವನ್ನು ಪಾಲನೆ ಮಾಡಿಲ್ಲ ಎಂದು ಮನಗಂಡು ಆರೋಪಿಗಳಿಗೆ 3 ವರ್ಷ ಕಾರಾಗೃಹ ಸಜೆ ಮತ್ತು ತಲಾ 1 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿತ್ತು.
ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ವೇದಿಕೆಯ ಬೆಂಗಳೂರಿನ ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದು ಇದನ್ನು ಪುರಸ್ಕರಿಸಿದ ಆಯೋಗ ಆದೇಶ ತಡಯಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ.
ಈ ವಿಚಾರದಲ್ಲಿ ಬಿಲ್ಡರ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿ, ವಾಸ್ತವವಾಗಿ ವೇದಿಕೆಗೆ ದೂರು ನೀಡಿದ ಮಹಿಳೆಗೆ ಪಾರ್ಕಿಂಗ್ ಸ್ಥಳ ಒದಗಿಸಲಾಗಿತ್ತು. ಈ ಕುರಿತು ಅಗ್ರಿಮೆಂಟ್ ನಲ್ಲೂ ಒಪ್ಪಿದ್ದರು. ಆದರೆ ಒಂದು ವರ್ಷದ ಬಳಿಕ ತಮಗೆ ಕಟ್ಟಡದಡಿಯಲ್ಲೇ ಪಾರ್ಕಿಂಗ್ ಕೇಳಿದ್ದರು. ಅದನ್ನು ನೀಡುವುದಾದರೂ ಹೇಗೆ ಎಂದು ನಾವು ವೇದಿಕೆಯಲ್ಲಿ ವಾದಿಸಿದ್ದೆವು. ಆದರೆ ಅದನ್ನು ಪರಿಗಣಿಸದೆ ತೀರ್ಪು ನೀಡಲಾಗಿತ್ತು. ಈಗ ಮೇಲ್ಮನವಿಯನ್ನು ವೇದಿಕೆಯ ರಾಜ್ಯ ಆಯೋಗ ಪರಿಗಣಿಸಿ ತಡೆಯಾಜ್ಞೆ ನೀಡಿದೆ. ನಮಗೆ ಈಗ ಆ ಕಟ್ಟಡದ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದರು.