ರಾಜ್ಯ ಬಿಜೆಪಿಯಲ್ಲಿ ಡ್ರಾಮಾ; ವಿಪಕ್ಷ ನಾಯಕನ ವಿರುದ್ಧವೇ ಬಿಜೆಪಿ ಶಾಸಕರು ಗರಂ.!

ರಾಜ್ಯ

‘ಸಾಮ್ರಾಟ’ ಇಡುಗಂಟು ಇಲ್ಲ..ಬೆಲೆನೂ ಇಲ್ಲ..ಇದೆಂಥಾ ದುರ್ವಿಧಿ!

ಬಿಜೆಪಿ ಹೈಕಮಾಂಡ್ ‘ತ್ರಿ’ ಮೂರ್ತಿಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಬೇಕು. ಮ್ಯಾಜಿಕ್ ನಡೆಯಬೇಕು. ಸ್ಟ್ರಾಂಗ್ ವಿರೋಧದಿಂದಾಗಿ ರಾಜ್ಯದಲ್ಲಿ ಬಿಜೆಪಿ ಪರ ಅಲೆಯೊಂದನ್ನು ಸೃಷ್ಟಿಸಬೇಕು ಅಂದುಕೊಂಡಿದ್ದ ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಉಲ್ಟಾಪಲ್ಟಾ ಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ದೋಸ್ತಿನೊಂದಿಗೆ ಕುಮಾರಸ್ವಾಮಿ, ವಿಪಕ್ಷ ನಾಯಕ ಅಶೋಕ್, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸದನದಲ್ಲಿ ಅಬ್ಬರಿಸುವಂತೆ ಮಾಡಿ ಕಾಂಗ್ರೆಸ್ ಕಕ್ಕಾಬಿಕ್ಕಿ ಮಾಡುವ ಪ್ಲ್ಯಾನ್ ಉಲ್ಟಾ ಆಗಿದೆ.
ಬಿಜೆಪಿಯಲ್ಲೇ ಭಿನ್ನಮತ ಸದನದಲ್ಲಿ ಬಹಿರಂಗ ಆಗುವ ಮೂಲಕ ರಾಜ್ಯದ ಜನರ ಎದುರಲ್ಲಿ ಬೆತ್ತಲಾದಂತೆ ಆಗಿದೆ.

ಆರ್‌. ಅಶೋಕ್‌ ವಿಪಕ್ಷ ನಾಯಕರಾದ ಬಳಿಕ ಬಿಜೆಪಿಯೊಳಗಡೆ ಶೀತಲ ಸಮರ ಆರಂಭವಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಇಡುಗಂಟು ಕಳೆದುಕೊಂಡಿದ್ದ ಅಶೋಕ್ ವಿಪಕ್ಷ ನಾಯಕನಾಗಿ ಘೋಷಿಸಿದಾಗಲೇ ಬಿಜೆಪಿಗರು ಹೌಹಾರಿದ್ದರು. ಆದರೆ ಅದು ಇದೀಗ ಸದನದಲ್ಲಿ ಜಗಜ್ಜಾಹೀರವಾಗಿದೆ. ವಿಪಕ್ಷ ನಾಯಕ ಆರ್‌. ಅಶೋಕ್‌ ನಿರ್ಧಾರದ ವಿರುದ್ಧವೇ ಉಳಿದ ಬಿಜೆಪಿ ಶಾಸಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ವಿಪಕ್ಷ ನಾಯಕರು ಸಭಾತ್ಯಾಗ ಮಾಡಬಾರದಿತ್ತು ಎಂದು ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಧರಣಿ ಮಾಡಬಾರದಿತ್ತು ಎಂದು ಕೆಲವು ಶಾಸಕರು ಅಸಮಾಧಾನ ತೋರಿಸಿದ್ದಾರೆ. ವಾಚನಾಲಯದಲ್ಲಿ ಸೇರಿ ಚರ್ಚೆ ಮಾಡಿದ ಬಿಜೆಪಿ ಶಾಸಕರು, ಕೋಪತಾಪ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ನಾನು ಬೆಂಗಳೂರಿಗೆ ಹೋಗುತ್ತೇನೆ, ಇವರನ್ನು ಕಟ್ಟಿಕೊಂಡರೆ ಪಕ್ಷ ಇನ್ನಷ್ಟು ಕೆಳಕ್ಕೆ ಹೋಗುತ್ತದೆ ಎಂದು ಸಿಟ್ಟು ಪ್ರದರ್ಶನ ಮಾಡಿದ ಎಸ್. ಆರ್. ವಿಶ್ವನಾಥ್ ಕೂಡ ಸದನದಿಂದ ಹೊರಟು ಹೋಗಿದ್ದಾರೆ. ಕೆಲವು ಶಾಸಕರು ಸದನದಿಂದ ಹೊರಡುವ ನಿರ್ಧಾರದ ವೇಳೆ ಶಾಸಕ ಅಭಯ ಪಾಟೀಲ್ ಮಾತ್ರ ಸದನದ ಬಾವಿಯಲ್ಲಿ ನಿಂತು ಧರಣಿ ಮಾಡಿದ್ದರು. ಆ ನಂತರ ಶಾಸಕ ಅಭಯ್ ಪಾಟೀಲ್ ಕೂಡ ಅಶೋಕ್ ಮೇಲೆ ಕಿಡಿ ಕಾರಿದ್ರು. ಸದನದ ಬಾವಿಗಿಳಿದು ಧರಣಿ ಮಾಡಬೇಕು ಅಂತಾ ಅಂದುಕೊಂಡಿದ್ದೆವು. ಆದರೆ, ಇವರು ಸಭಾತ್ಯಾಗ ಮಾಡಿದ್ದಾರೆ. ಇನ್ನು ಮುಂದೆ ಶಾಸಕಾಂಗ ಸಭೆಗೆ ಬರೋದಿಲ್ಲ. ಇವರಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ರಾಜಕಾರಣ ಮಾಡೋದು ನನಗೆ ಗೊತ್ತಿದೆ ಎಂದು ಹೇಳಿ ಅಭಯ್ ಪಾಟೀಲ್ ಹೊರಟು ನಿಂತರು. ಈ ವೇಳೆ ಸಂಧಾನ ನಡೆಸಲು ಮುಂದಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ನಿನ್ನ ಜೊತೆ ಇದ್ದೇನೆ ಬಾ ಎಂದು ಕರೆದರು. ಆದರೂ ನನಗೆ ಈ ರಾಜಕಾರಣ ಬೇಕಿಲ್ಲ ಎಂದು ಕೋಪದಿಂದ ಹೊರಟ ಅಭಯ್ ಪಾಟೀಲ್‌, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಬಹಿರಂಗ ಮಾಡಿದರು.

ಅಧಿವೇಶನದಲ್ಲೇ ಬಿಜೆಪಿ ಭಿನ್ನಮತ ಸ್ಫೋಟಗೊಂಡು ಡ್ರಾಮಾ ನಡೆದಿದೆ. ಇದರ ನಡುವೆ ಶುಕ್ರವಾರ ಬೆಳಗ್ಗೆ ಬೆಳಗಾವಿಯಿಂದಲೇ ದೆಹಲಿಗೆ ಪ್ರಯಾಣ ಬೆಳೆಸಿ ಹೈಕಮಾಂಡ್‌ ನಾಯಕರ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸದನ ಆರಂಭಕ್ಕೂ ಮೊದಲು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಅಧ್ಯಕ್ಷರು ಹಾಗು ವಿರೋಧ ಪಕ್ಷದ ನಾಯಕನ ಸ್ಥಾನ ಒಂದು ವರ್ಷ ಮಾತ್ರ ಎಂದಿದ್ದೂ ಸೇರಿದಂತೆ ಇತ್ತೀಚಿಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲಾಗುತ್ತದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಎರಡನೇ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವ ವಿಜಯೇಂದ್ರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಹಾಗು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನ ನೇಮಕ ಮಾಡುವ ಬಗ್ಗೆ ಹೈಕಮಾಂಡ್‌ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.