ಕಾನೂನಿಗಿಂತ ಯಾರೂ ದೊಡ್ಡವರಲ್ಲ; ಕರ್ತವ್ಯಕ್ಕೆ ಚ್ಯುತಿ ಬಂದರೆ ಸೂಕ್ತ ಪರಿಣಾಮ ಎದುರಿಸಲೇಬೇಕು: ಕೇರಳ ಹೈಕೋರ್ಟ್‌

ರಾಷ್ಟ್ರೀಯ

ನ್ಯಾಯಾಧೀಶರೂ ಸೇರಿದಂತೆ ನ್ಯಾಯಾಂಗದ ಉನ್ನತ ಅಧಿಕಾರಿಗಳು ಕಾನೂನಿಗಿಂತ ದೊಡ್ಡವರಲ್ಲ. ಕರ್ತವ್ಯದಲ್ಲಿ ಲೋಪ ಮಾಡಿದರೆ, ಅಥವಾ ಬದ್ಧತೆಗೆ ಚ್ಯುತಿ ಬಂದರೆ ಅವರೂ ಕಾನೂನು ಪ್ರಕಾರ ಸೂಕ್ತ ಪರಿಣಾಮವನ್ನು ಎದುರಿಸಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲಕ್ಷದ್ವೀಪದ ಮಾಜಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಕೆ. ಚೆರಿಯ ಕೋಯಾ ಅವರನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿದ ಕೇರಳ ಹೈಕೋರ್ಟ್ ನ್ಯಾಯಪೀಠ, ಈ ಮಹತ್ವದ ಆದೇಶ ನೀಡಿದೆ.

ಇಂತಹ ತೀರ್ಪುಗಳು ಎಲ್ಲರಿಗೂ ಪಾಠವಾಗಬೇಕು. ತಪ್ಪು ಎಸಗಿದ್ದರೆ ನ್ಯಾಯಾಧೀಶರೂ ಶಿಕ್ಷೆಗೆ ಅರ್ಹರು ಎಂದು ತೀರ್ಪು ನೀಡಿರುವ ಹೈಕೋರ್ಟ್ ಪೀಠ, ಸದ್ಯ ಲಕ್ಷದ್ವೀಪದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಸಿಜೆಎಂ ಜಡ್ಜ್‌ ಚೆರಿಯ ಕೋಯಾ ಅವರನ್ನು ಅಮಾನತು ಮಾಡುವಂತೆ ಲಕ್ಷದ್ವೀಪದ ಆಡಳಿತಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.

ಆರೋಪಿಯೊಬ್ಬರಿಗೆ ಶಿಕ್ಷೆ ವಿಧಿಸುವ ಸಲುವಾಗಿ ನಕಲಿ ಸಾಕ್ಷ್ಯ ಸೃಷ್ಟಿಸಿದ ಆರೋಪವನ್ನು ಜಡ್ಜ್‌ ಚೆರಿಯಕೋಯಾ ಎದುರಿಸುತ್ತಿದ್ದರು. ಚೆರಿಯಕೋಯಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಹೇಳಿರುವ ನ್ಯಾಯಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಬೆಂಚ್ ಕ್ಲರ್ಕ್‌ ಮತ್ತು ದ್ವಿತೀಯ ದರ್ಜೆ ಸಹಾಯಕರ ವಿರುದ್ಧವೂ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ