ಕಲಬುರಗಿ ಉದನೂರು ಗ್ರಾಮದ ವಕೀಲ ಈರಣ್ಣಗೌಡ ಪಾಟೀಲ ಕೊಲೆ ಸಂಬಂಧ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನೀಲಕಂಠರಾವ್ ಪಾಟೀಲ ಮತ್ತು ಸಿದ್ದಮ್ಮ ಪಾಟೀಲ ಬಂಧಿತ ದಂಪತಿ ಆರೋಪಿಗಳು. ಮಲ್ಲಿನಾಥ ಬಸಣ್ಣ, ಮತ್ತು ಅವ್ವಣಪ್ಪ ಭಗವಂತರಾವ್ ಅವರನ್ನು ಮೊದಲು ಬಂಧಿಸಲಾಗಿತ್ತು.
ಈರಣ್ಣಗೌಡ ಕೊಲೆಯಾದ ದಿನ ಸಿದ್ದಮ್ಮ ಅವರು ಮಲ್ಲಿನಾಥಗೆ ರೂ.50 ಸಾವಿರ ನೀಡಿದ್ದರು. ಕೃತ್ಯ ನಡೆಯುವ ನಾಲ್ಕೈದು ದಿನಗಳು ಮೊದಲೇ ಕೊಲೆಗೆ ಯೋಜನೆ ಹಾಕಿಕೊಂಡಿದ್ದರು. ಕೊಲೆ ನಡೆಯುವ ದಿನದಂದು ದಂಪತಿ ತಮ್ಮ ಹೊಸ ಕಾರಿನ ಪೂಜೆಗಾಗಿ ಅಫಜಲಪುರದ ದೇವಲ ಗಾಣಗಾಪುರಕ್ಕೆ ತೆರಳಿದ್ದರು. ಕಾರು ಪೂಜೆ ಮುಗಿಸಿ ದೇವರ ದರ್ಶನ ಪಡೆಯುವಾಗಲೇ ಈರಣ್ಣಗೌಡ ಕೊಲೆಯಾದ ಸುದ್ದಿ ತಿಳಿದು, ಅವರು ಸಂತಸ ಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ದಂಪತಿ ಪೂಜೆ ಮುಗಿಸಿ ಕಲಬುರಗಿಯ ಮನೆಗೆ ವಾಪಸ್ ಬಂದರು. ಮಲ್ಲಿನಾಥ ಕೊಲೆ ಮಾಡಿದ ರಕ್ತದ ಕಲೆಯೊಂದಿಗೆ ನೀಲಕಂಠರಾವ್ ಮನೆಗೆ ಬಂದು, ಹಣ ಪಡೆದಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ತಿಳಿದು ಬಂದಿದೆ