ಆರ್ ಎಸ್ ಎಸ್ ಮುಖಂಡ’ ಎಂದು ಹೆಚ್.ಡಿ ಕುಮಾರಸ್ವಾಮಿ ನಂಬಿರುವುದೇ ಮೂರ್ಖತನ.!
✍️.ನವೀನ್ ಸೂರಿಂಜೆ,ಪತ್ರಕರ್ತ
“ಕಲ್ಲಡ್ಕ ಪ್ರಭಾಕರ್ ಭಟ್ ಬಗೆಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ನಾನು ಈ ಹಿಂದೆ ಅವರನ್ನು ಟೀಕಿಸಿದ್ದೆ. ಅದಕ್ಕಾಗಿ ವಿಷಾದಿಸುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯಕ್ರಮದಲ್ಲಿ ಹೇಳಿದ್ದು ಚರ್ಚೆಗೆ ಒಳಗಾಗಿದೆ. ವಾಸ್ತವವಾಗಿ ಈಗಲೂ ಕಲ್ಲಡ್ಕ ಪ್ರಭಾಕರ ಭಟ್ಟರ ಬಗ್ಗೆ ಕುಮಾರಸ್ವಾಮಿಯವರಿಗೆ ಯಾರೂ ಸರಿಯಾದ ಮಾಹಿತಿ ನೀಡಿಲ್ಲ ಎಂಬುದು ವಿಪರ್ಯಾಸ !
ಜೆಡಿಎಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಜೊತೆ ಸೇರಿಕೊಂಡ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಒಲಿಸಿಕೊಳ್ಳಲು ಎಚ್ ಡಿ ಕುಮಾರಸ್ವಾಮಿಯವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಮೊದಲ ಹಂತವಾಗಿ ‘ನಾನೂ ದತ್ತಮಾಲೆ ಧರಿಸಿ ದತ್ತಮಾಲಾ ಯಾತ್ರಾರ್ಥಿ ಆಗುತ್ತೇನೆ’ ಎಂದು ಹೇಳಿಕೆ ನೀಡಿದ್ದರು. ಈಗ ಆರ್ ಎಸ್ ಎಸ್ / ಬಿಜೆಪಿಯನ್ನು ಒಲಿಸಿಕೊಳ್ಳುವ ಮುಂದುವರೆದ ಭಾಗವಾಗಿ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಹೊಗಳಿದ್ದಲ್ಲದೇ ಈ ಹಿಂದೆ ಟೀಕಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ‘ಕೆಲವರು ನನಗೆ ಪ್ರಭಾಕರ ಭಟ್ಟರ ಬಗೆಗೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಹಿಂದೆ ಟೀಕಿಸಿದ್ದೆ’ ಎಂದಿದ್ದಾರೆ.
ಆದರೆ ವಾಸ್ತವವಾಗಿ “ಕಲ್ಲಡ್ಕ ಪ್ರಭಾಕರ ಭಟ್ಟರು ಆರ್ ಎಸ್ ಎಸ್ ಮುಖಂಡರು” ಎಂಬ ತಪ್ಪು ಮಾಹಿತಿಯಿಂದಲೇ ಎಚ್ ಡಿ ಕುಮಾರಸ್ವಾಮಿಯವರು ಈ ಕಾರ್ಯಕ್ರಮಕ್ಕೆ ಒಪ್ಪಿ ಬಂದಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ಟರು ಸಧ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರೇ ಅಲ್ಲ ! ಇಷ್ಟಕ್ಕೂ ರಾಷ್ಷ್ರೀಯ ಸ್ವಯಂ ಸೇವಕ ಸಂಘಕ್ಕೆ ಮುಖಂಡರೇ ಇರುವುದಿಲ್ಲ. ಅಲ್ಲೇನಿದ್ದರೂ ನಿಗದಿಪಡಿಸಿದ ಹುದ್ದೆ/ಜವಾಬ್ದಾರಿಯಿಂದಲೇ ಕರೆಸಲ್ಪಡುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ಟರು 2013 ರಿಂದ ಈವರೆಗೆ ಅಂದರೆ ಕಳೆದ ಹತ್ತು ವರ್ಷಗಳಿಂದ ಆರ್ ಎಸ್ ಎಸ್ ನ ಯಾವ ಜವಾಬ್ದಾರಿಯಲ್ಲೂ ಇಲ್ಲ. ಅವರೊಬ್ಬ ಕಳಪೆ ದರ್ಜೆಯ ಕೋಮುವಾದಿ, ಮನುಷ್ಯ ವಿರೋಧಿಯಷ್ಟೆ. ಹೆಚ್ಚೆಂದರೆ ಈಗ ಅವರು ಹಿಂದುತ್ವವಾದಿಗಳಿಗೆ ಪ್ರಮೋದ್ ಮುತಾಲಿಕ್ ಮಟ್ಟದ ನಾಯಕರಷ್ಟೆ ! ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಖುಷಿಪಡಿಸಿದರೆ ಆರ್ ಎಸ್ ಎಸ್ ಗೇ ಖುಷಿಪಡಿಸಿದಂತೆ ಎಂದು ಎಚ್ ಡಿ ಕುಮಾರಸ್ವಾಮಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿದಂತಿದೆ.
2012 ರವರೆಗೆ ಕಲ್ಲಡ್ಕ ಪ್ರಭಾಕರ ಭಟ್ಟರು ಕರಾವಳಿಯಲ್ಲಿ ಆರ್ ಎಸ್ ಎಸ್ ಮೂಲಕ ರಕ್ತಸಿಕ್ತ ಅಧ್ಯಾಯವನ್ನು ಸೃಷ್ಟಿಸಿದ್ದರು. ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿ, ಗೋಸಾಗಾಟಗಾರರ ಮೇಲೆ ಹಲ್ಲೆ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಗೂಂಡಾಗಿರಿ ಮಾಡಿಸುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೇ ಹೇಸಿಗೆ ಹುಟ್ಟುವ ರೀತಿಯಲ್ಲಿ ಬೆಳೆದಿದ್ದರು. 2012 ರವರೆಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿ ಟಿಕೆಟ್ ಸಿಗಬೇಕಾದರೆ ಕಲ್ಲಡ್ಕ ಪ್ರಭಾಕರ ಭಟ್ಟರ ಒಪ್ಪಿಗೆ ಬೇಕಾಗಿತ್ತು. 28 ಜುಲೈ 2012- ಹೋ ಸ್ಟೇಯಲ್ಲಿ ಹಿಂದೂ ಹುಡುಗಿಯರು, ಮುಸ್ಲಿಂ ಹುಡುಗರು ರೇವ್ ಪಾರ್ಟಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದುತ್ವವಾದಿಗಳು ಯುವಕ ಯುವತಿಯರ ಮೇಲೆ ದಾಳಿ ನಡೆಸಿದ್ದರು. ಇದು ಭಾರತೀಯ ಸಂಸ್ಕೃತಿಯನ್ನು ಉಳಿಸಲು, ರೇವ್ ಪಾರ್ಟಿಯನ್ನು ತಡೆಯಲು ನಡೆಸಿದ ದಾಳಿ ಎಂದು ಪ್ರಭಾಕರ ಭಟ್ಟರು ಹೇಳಿಕೊಂಡಿದ್ದರು. ಆದರೆ ಆ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ನಾನು ‘ಬರ್ತ್ ಡೇ ಪಾರ್ಟಿ ಮೇಲೆ ನಡೆದ ನೈತಿಕ ಪೋಲಿಸ್ ಗಿರಿಯಾಗಿದ್ದು, ಯಾವ ರೀತಿಯ ಅಸಭ್ಯ, ಕಾನೂನು ಬಾಹಿರ ಪಾರ್ಟಿ ನಡೆಯುತ್ತಿರಲಿಲ್ಲ. 40 ಕ್ಕೂ ಹೆಚ್ಚು ಜನರಿದ್ದ ಹಿಂದುತ್ವ ಸಂಘಟನೆಯವರೇ ಹುಡುಗಿಯರ ಬಟ್ಟೆಗಳನ್ನು ಎಳೆದು ವಿವಸ್ತ್ರ ಮಾಡಿದ್ದರು. ಹುಡುಗ ಹುಡುಗಿಯರು ಸಭ್ಯ ರೀತಿಯಲ್ಲಿ ಬರ್ತ್ ಡೇ ಆಚರಿಸುತ್ತಿದ್ದರು’ ಎಂದು ಸುಧೀರ್ಘವಾಗಿ ಸಚಿತ್ರ ವರದಿ ಮಾಡಿದ್ದೆ. ಇದು ರಾಷ್ಟ್ರೀಯ- ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಆರ್ ಎಸ್ ಎಸ್ ತೀವ್ರ ಮುಖಭಂಗ ಅನುಭವಿಸಿತ್ತು. ಅದೇ ಕೋಪದಲ್ಲಿ ಆಗ ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಕಾರ್ಯವಾಹರಾಗಿದ್ದ ಪ್ರಭಾಕರ ಭಟ್ಟರು ತನ್ನದೇ ಬಿಜೆಪಿ ಸರ್ಕಾರದ ಪೊಲೀಸರಿಗೆ ಸೂಚನೆ ನೀಡಿ ನನ್ನ ವಿರುದ್ದ ಎಫ್ಐಆರ್ ದಾಖಲಿಸಿದರು. ‘ಹೋಂ ಸ್ಟೇ ಅಟ್ಯಾಕ್ ಅನ್ನು ಸುದ್ದಿ ಮಾಡುವ ಮೂಲಕ ದೇಶದಾದ್ಯಂತ ಮಂಗಳೂರಿನ ಮಾನ ಹರಾಜು ಮಾಡಿದ್ದಲ್ಲದೇ ಪ್ರತಿಭಟನೆಗಳು ನಡೆಯಲು ಸುದ್ದಿ ಕಾರಣವಾಯಿತು. ಇದು ಶಾಂತಿ ಕದಡುವಂತಾಯಿತು” ಎಂಬ ಅರ್ಥ ಬರುವಂತೆ ನನ್ನ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣ ದಾಖಲಿಸಿ ನಾಲ್ಕು ತಿಂಗಳಾದರೂ ಪೊಲೀಸರು ನನ್ನನ್ನು ಬಂಧಿಸಿರಲಿಲ್ಲ. ನಾನೂ ನಿರೀಕ್ಷಣಾ ಜಾಮೀನು ಪಡೆಯದೇ ಪೊಲೀಸರ ಪ್ರೆಸ್ ಮೀಟ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ರಾಜಾರೋಷವಾಗಿ ಹೋಗುತ್ತಿದ್ದೆ.
2012 ನವೆಂಬರ್ 07 ರಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಜೆಡಿಎಸ್ ಸಮಾವೇಶಕ್ಕೆ ಬಂದಿದ್ದರು. ಈ ಕಾರ್ಯಕ್ರಮವನ್ನು ವರದಿ ಮಾಡಲು ನಾನು ಪತ್ರಕರ್ತ ಗೆಳೆಯರಾದ ರಾಜೇಶ್ ರಾವ್, ರಾಜೇಶ್ ಪೂಜಾರಿ ಜೊತೆ ವಿಟ್ಲಕ್ಕೆ ಹೋಗಿದ್ದೆ. ಅಂದು ಸಂಜೆ ಸುಮಾರು 7.30 ಕ್ಕೆ ಸಮಾವೇಶದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿಯವರು ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಾ “ಈ ಕಲ್ಲಡ್ಕ ಪ್ರಭಾಕರ ಭಟ್ಟ ಮಾಡೋದೆಲ್ಲಾ ಮಾಡಿ, ಅದನ್ನು ಸುದ್ದಿ ಮಾಡಿದ ಪತ್ರಕರ್ತ ನವೀನ್ ಸೂರಿಂಜೆ ಮೇಲೆ ಕೇಸು ಹಾಕಿಸಿದ್ದಾರೆ. 2013 ಕ್ಕೆ ನನ್ನ ಸರ್ಕಾರ ಬಂದರೆ ಮೊದಲು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಜೈಲಿಗೆ ಹಾಕುತ್ತೇನೆ” ಎಂದು ಘೋಷಿಸಿದ್ದರು. ಕುಮಾರಸ್ವಾಮಿಯವರ ಈ ಭಾಷಣದ ವರದಿಗಾರಿಕೆ ಮುಗಿಸಿ ಟಿವಿ 9 ವರದಿಗಾರ ರಾಜೇಶ್ ರಾವ್ ರವರ ಕಾರಿನಲ್ಲಿ ನಾನು ಮಂಗಳೂರಿಗೆ ವಾಪಸ್ ಬರುತ್ತಿರುವಾಗ ಬಿಜೆಪಿ ಸರ್ಕಾರದ ಪೊಲೀಸರು ನನ್ನನ್ನು ಬಂಧಿಸಿದ್ದರು !
ನನ್ನ ಬಂಧನವೇ ಕಲ್ಕಡ್ಕ ಪ್ರಭಾಕರ ಭಟ್ಟರದ್ದು ಕೊನೇ ಸಾಧನೆ ! ಆ ಬಳಿಕ ಎರಡ್ಮೂರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಕರಾವಳಿ ಮತ್ತು ಮಲೆನಾಡಿನ ಬಿಜೆಪಿಗರು ಕಲ್ಲಡ್ಕ ಪ್ರಭಾಕರ ಭಟ್ಟರಿಂದ ರೋಸಿ ಹೋಗಿದ್ದರು. ಬಿಜೆಪಿಯಲ್ಲಿ ಪ್ರಭಾಕರ ಭಟ್ಟರ ವಿರುದ್ದ ಮೊದಲ ಬಂಡಾಯ ಸಾರಿದ್ದು ಶಕುಂತಲಾ ಶೆಟ್ಟಿಯವರು. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶಕುಂತಲಾ ಶೆಟ್ಟಿಯವರಿಗೆ ಸ್ತ್ರೀ ವಿರೋಧಿ ಭಟ್ಟರು ಅಡ್ಡಿಯಾಗಿದ್ದರು. ಆದರೆ ಬಿಜೆಪಿ ಕಾರ್ಯಕರ್ತರ ಬೆಂಬಲ ಶಕುಂತಲ ಶೆಟ್ಟಿಯವರಿಗಿತ್ತು. ಅನಿವಾರ್ಯವಾಗಿ ಶಕುಂತಲಾ ಶೆಟ್ಟಿಯರಿಗೆ ಬಿಜೆಪಿ ಸರ್ಕಾರದಲ್ಲಿ ಸ್ಥಾನಮಾನ ನೀಡಲೇಬೇಕಾಗಿತ್ತು. ಆಗ ಗೇರು ಅಭಿವೃದ್ದಿ ನಿಗಮಕ್ಕೆ ಶಾಸಕರಾದ ಶಕುಂತಲಾ ಶೆಟ್ಟಿಯವರನ್ನು ನೇಮಿಸಲು ನಿರ್ಧರಿಸಲಾಯಿತು. ಅದನ್ನು ನಿರಾಕರಿಸಿದ ಶಕುಂತಲಾ ಶೆಟ್ಟಿಯವರು ‘ಬೀಜ ಭಟ್ಟೆನೇ ಮಾರಡು'(ಗೇರು ಬೀಜ ಭಟ್ಟನೇ ಮಾರಲಿ) ಎಂದರು. 2009 ರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರೇ ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದ ನಳಿನ್ ಕುಮಾರ್ ಕಟೀಲ್ ಅವರು 2014 ರ ಲೋಕಸಭಾ ಚುನಾವಣೆ ವೇಳೆಗೆ ಪ್ರಭಾಕರ ಭಟ್ಟರ ವಿರೋಧಿಯಾಗಿದ್ದರು. ಆದರೆ ಪ್ರಭಾಕರ ಭಟ್ಟರ ಪ್ರಭಾವವನ್ನೂ ಮೀರಿ ಟಿಕೆಟ್ ಪಡೆದುಕೊಂಡ ನಳಿನ್ ಕುಮಾರ್ ಕಟೀಲ್ ಗೆದ್ದು ತೋರಿಸಿದ್ದರು. ನಳಿನ್ ಕುಮಾರ್ ಕಟೀಲರನ್ನು ಸೋಲಿಸಲು ಒಳಗೊಳಗೆ ಭಟ್ಟರು ಕೆಲಸ ಮಾಡಿದರೂ ಸಫಲರಾಗಲಿಲ್ಲ. ಅದು ಭಟ್ಟರ ಪತನದ ಕಾಲ. ಆ ಬಳಿಕ ಕರಾವಳಿ, ಮಲೆನಾಡಿನ ಯಾವ ಶಾಸಕರೂ ಪ್ರಭಾಕರ ಭಟ್ಟರ ಹಿಡಿತದಲ್ಲಿ ಇಲ್ಲ. 2023 ರ ವಿಧಾನಸಭೆ ಚುನಾವಣೆಯಲ್ಲೂ ಪ್ರಭಾಕರ ಭಟ್ಟರ ಶಿಷ್ಯಂದಿರಿಗೆ ಟಿಕೆಟ್ ನಿರಾಕರಿಸಲಾಯಿತು. ಪ್ರಭಾಕರ ಭಟ್ಟರ ನಿಕಟವರ್ತಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಈವರೆಗೂ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿಲ್ಲ. ಅದಕ್ಕೆ ಕಾರಣ ಆರ್ ಎಸ್ ಎಸ್ ನಲ್ಲಿ ಪ್ರಭಾಕರ ಭಟ್ಟರಿಗೆ ಇಲ್ಲದ ಜವಾಬ್ದಾರಿ !
ಈಗ ಆರ್ ಎಸ್ ಎಸ್ ನಲ್ಲಿ ಬಿ ಎಲ್ ಸಂತೋಷ್ ಅವರ ಕಾಲ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಿ ಎಲ್ ಸಂತೋಷರನ್ನು ನೇಮಕ ಮಾಡಿಕೊಂಡಿದೆ. ಸಧ್ಯ ಬಿಜೆಪಿಯನ್ನು ನಿಯಂತ್ರಿಸುವ ಆರ್ ಎಸ್ ಎಸ್ ಕಾರ್ಯವಾಹ ಮಂಡಳಿ ಪೂರ್ತಿ ಪ್ರಭಾಕರ ಭಟ್ಟರನ್ನು ವಿರೋಧಿಸುವ ತಂಡವಾಗಿದೆ. ಈಗ ಕಲ್ಲಡ್ಕ ಪ್ರಭಾಕರ ಭಟ್ಟರು ಆರ್ ಎಸ್ ಎಸ್ ನಲ್ಲಿರುವ ಲಕ್ಷಾಂತರ ಸದಸ್ಯರಂತೆ ಒರ್ವ ಸಾಮಾನ್ಯ ಸದಸ್ಯ. ಕನಿಷ್ಠ ಸಂಘಟನೆಯ ಪ್ರಚಾರಕ ಹುದ್ದೆಯೂ ಇಲ್ಲದಂತಹ ಸಾಮಾನ್ಯ ಸದಸ್ಯ. ಅದೂ ಸಂಘದಲ್ಲಿ ನೆಗೆಟಿವ್ ಇಮೇಜ್ ಹೊಂದಿರುವ ಸದಸ್ಯ ! ಇಂತಹ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಹೊಗಳಿದರೆ ಬಿಜೆಪಿಯಿಂದ ಸಿಗುವ ಲಾಭವೂ ಸಿಗದಂತಾಗುತ್ತದೆ. ಇದು ರಾಜಕೀಯವಾಗಿ ಒಳ್ಳೆಯ ತಂತ್ರಗಾರಿಕೆಯಲ್ಲ. ಕಳಪೆ ದರ್ಜೆಯ ಮುಸ್ಲಿಂ ವಿರೋಧಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ‘ಬಿಜೆಪಿಯ ರಾಜಕೀಯ ನಿರ್ಧರಿಸುವ ಆರ್ ಎಸ್ ಎಸ್ ಮುಖಂಡ’ ಎಂದು ಹೆಚ್ ಡಿ ಕುಮಾರಸ್ವಾಮಿ ನಂಬಿರುವುದೇ ಮೂರ್ಖತನ ! ಇಂತಹ ತಪ್ಪು ಮಾಹಿತಿ ಹೆಚ್ ಡಿ ಕುಮಾರಸ್ವಾಮಿಗೆ ನೀಡಿದವರಾರು ?