ವಕೀಲರ ಮೇಲೆ ಹಲ್ಲೆಗೆ 3 ವರ್ಷ ಜೈಲು ಶಿಕ್ಷೆ: ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡನೆ

ರಾಜ್ಯ

ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಅಥವಾ ಹಿಂಸಾಚಾರ ನಡೆಸುವವರಿಗೆ 6 ತಿಂಗಳಿನಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಅನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಅವರು ವಿಧೇಯಕವನ್ನು ಮಂಡಿಸಿದರು. ವಕೀಲರು ತಮ್ಮ ಕರ್ತವ್ಯ ನಿರ್ವಹಿಸುವ ವಿಷಯದಲ್ಲಿ ಬೆದರಿಕೆಗಳು ಬಂದಾಗ, ಕರ್ತವ್ಯ ನಿರ್ವಹಣೆಗೆ ಅಡ್ಡಿಯಾದಾಗ ಮತ್ತು ಅವರ ಮೇಲೆ ಹಲ್ಲೆ ನಡೆಯುವಂತಹ ಸಂದರ್ಭಗಳಲ್ಲಿ ರಕ್ಷಣೆ ನೀಡಲು ಈ ವಿಧೇಯಕವನ್ನು ರೂಪಿಸಲಾಗಿದೆ.

ಯಾವುದೇ ಅಪರಾಧ ಪ್ರಕರಣಗಳಲ್ಲಿ ವಕೀಲರನ್ನು ಬಂಧಿಸಿದಾಗ 24 ಗಂಟೆಯೊಳಗೆ ಆ ವಕೀಲರು ಸದಸ್ಯರಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯವನ್ನು ಪೊಲೀಸರು ತಿಳಿಸಬೇಕು. ಈ ವಿಧೇಯಕದ ಅಡಿಯಲ್ಲಿ ದಾಖಲಿಸುವ ಪ್ರಕರಣಗಳ ವಿಚಾರಣೆಯನ್ನು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಥವಾ ಅದಕ್ಕಿಂತ ಕಡಿಮೆ ಇರದ ನ್ಯಾಯಾಲಯಗಳಲ್ಲೇ ವಿಚಾರಣೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ.