ಇದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಪಂಜಿನಡ್ಕದ ಕಥೆ. ಜಿಲ್ಲೆಯಲ್ಲಿ ಈ ರೀತಿ ಎಲ್ಲೂ ನಡೆಯದ ಗ್ಯಾಮ್ಲಿಂಗ್ ಕೋಳಿ ಅಂಕ ಪಂಜಿನಡ್ಕದ ಕ್ರಿಕೆಟ್ ಮೈದಾನದಲ್ಲಿ ಬೃಹತ್ ಶಾಮಿಯಾನ ಹಾಕಿ ಪ್ರಭಾವೀಗಳು ಮುಂದೆ ನಿಂತು ಕೋಳಿ ಅಂಕ ನಡೆಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮ ಇದ್ದಾಗ ಸ್ಥಳೀಯರ ಮನವಿ ಮೇರೆಗೆ ಅಲ್ಲಲ್ಲಿ ಕೋಳಿ ಅಂಕ ನಡೆಯುವುದು ಸಾಮಾನ್ಯ. ಅದು ಕಾರ್ಯಕ್ರಮದ ನಿಮಿತ್ತ ಒಂದೋ ಅಥವಾ ಎರಡು ದಿನ ನಡೆಯುತ್ತದೆ. ಆದರೆ ಪಂಜಿನಡ್ಕದಲ್ಲಿ ಯಾವುದೇ ಕಾರ್ಯಕ್ರಮ ಇಲ್ಲದಿದ್ದರೂ ಕೋಳಿ ಅಂಕಕ್ಕೆ ಇಲ್ಲಿ ಯಾವುದೇ ಆತಂಕ ಇಲ್ಲ. ಭರ್ಜರಿ ಪೆಂಡಾಲ್ ಹಾಕಿಯೇ ಬಹಿರಂಗವಾಗಿಯೇ ಇಲ್ಲಿ ಕೋಳಿ ಅಂಕ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜೂಜುಕೋರರು ಇಲ್ಲಿ ಭರ್ಜರಿ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಲಕ್ಷಾಂತರ ರೂಪಾಯಿಯಿಂದ ಕೋಟ್ಯಂತರ ರೂಪಾಯಿ ವರೆಗೆ ಬೆಟ್ಟಿಂಗ್ ನಡೆಯುತ್ತಿದ್ದು, ಮೂಲ್ಕಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೌನ ತಾಳಿದ್ದಾರೆ. ಕೋಳಿ ಜೂಜುಕೋರರಿಂದ ಇಲ್ಲಿನ ಪೊಲೀಸರಿಗೆ ಮಾಮೂಲು ಹೋಗುತ್ತಿದೆ. ಆ ಕಾರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪ್ರತಿ ಶನಿವಾರ 12 ಗಂಟೆಯಿಂದ ಆದಿತ್ಯವಾರ 6 ಗಂಟೆಯವರೆಗೆ ಇಲ್ಲಿ ಕೋಳಿ ಅಂಕದ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವರ್ಷದ ಹಿಂದೆ ಸುರತ್ಕಲ್ ಎನ್ ಐ ಟಿ ಕೆ ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸಿದ 101 ಕ್ಕೂ ಅಧಿಕ ಹೋರಾಟಗಾರರ ಮೇಲೆ ಪೊಲೀಸರು ಕೇಸು ದಾಖಲಿಸಿ ಜಾರ್ಜ್ ಶೀಟ್ ಹಾಕಿದ್ದಾರೆ. ಸಾರ್ವಜನಿಕರನ್ನು ಲೂಟಿಗೈಯುತ್ತಿದ್ದ ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ಕೇಸ್. ವಿಪರ್ಯಾಸವೆಂದರೆ ಜನರ ದುಡ್ಡನ್ನು ಬಾಚಿ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಜೂಜುಕೋರರಿಗೆ ಇಲಾಖೆಯಿಂದಲೇ ಸಾಥ್. ಮಾನ್ಯ ಪೊಲೀಸ್ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.