ಬೆಂಗಳೂರು: 2024ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯ ಸರ್ಕಾರವು 32 ಮಂದಿ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಿದೆ. ಫೋನ್ ಕದ್ದಾಲಿಕೆ, ಮಹಿಳೆ ಮೇಲೆ ಹಲ್ಲೆ, ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆ ಆರೋಪದ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ
ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪದಕ ಪ್ರದಾನ ಮಾಡಲಾಗುತ್ತದೆ. 2024ನೇ ಸಾಲಿನ ಪದಕಕ್ಕೆ ಅರ್ಹರಿರುವ ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಟ್ಟಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ರವಾನಿಸಿದ್ದಾರೆ.
2019ರಲ್ಲಿ ಅಲೋಕ್‌ಕುಮಾರ್ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ 50 ವರ್ಷ ಪ್ರಾಯದ ಮಹಿಳೆಯೊಬ್ಬರು ತಮ್ಮ ಮೇಲೆ ಅಲೋಕ್‌ಕುಮಾರ್ ಹಲ್ಲೆ ಮಾಡಿ ಪ್ರಕರಣ ಹಿಂಪಡೆಯಲು ಜೀವ ಬೆದರಿಕೆಯೊಡ್ಡಿದ್ದರೆಂಬ ಆರೋಪದಡಿಯಲ್ಲಿ ಬೆಂಗಳೂರಿನ 39ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಬೆಂಗಳೂರಿನ ಬಾರ್ ಮತ್ತು ರೆಸ್ಟೊರೆಂಟ್‌ವೊಂದರಲ್ಲಿ 2015ರ ಮೇ 30ರಂದು ನಡೆದಿದ್ದ ಗಲಾಟೆ ಪ್ರಕರಣ ಇತ್ಯರ್ಥಪಡಿಸಲು ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪ ಅಲೋಕ್‌ಕುಮಾರ್ ಮೇಲಿತ್ತು. ಸಂತ್ರಸ್ತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು, ಬಿ-ರಿಪೋರ್ಟ್ ಸಲ್ಲಿಸಿದ್ದರು.
2019ರ ಆಗಸ್ಟ್ 2ರಂದು ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ನಿಯೋಜಿಸಲಾಗಿತ್ತು. ಆಗಸ್ಟ್ 8ರಂದು ಮೊಬೈಲ್ ಸಂಭಾಷಣೆಯ ಆಡಿಯೊ ತುಣುಕುಗಳನ್ನು ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಭಾಸ್ಕರ್ ರಾವ್ ಅವರು ಫೋನ್ ಕದ್ದಾಲಿಕೆ ಸಂಬಂಧ ದೂರು ನೀಡಿದ್ದರು. ನಂತರ ಸಿಬಿಐ ತನಿಖೆ ಆರಂಭವಾಗಿತ್ತು. ಸಿಸಿಬಿ ಅಧಿಕಾರಿಗಳ ಮೂಲಕ ಅಲೋಕ್ ಕುಮಾರ್ ಫೋನ್ ಕದ್ದಾಲಿಕೆ ಮಾಡಿಸಿದ್ದರೆಂಬ ಆರೋಪವಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣವನ್ನು ತಿರಸ್ಕರಿಸಿತ್ತು. ಪ್ರಕರಣ ಸಂಬಂಧ ತನಿಖೆ ಮುಂದುವರಿಸಲು ನ್ಯಾಯಾಲಯ ಸೂಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಎಲ್ಲಾ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಹೆಸರನ್ನು ಶಿಫಾರಸು ಮಾಡಲಾಗಿದೆ.