ಸಂಸತ್ ಭವನದಲ್ಲಿ ಭದ್ರತಾ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪುರುಷ ಮತ್ತು ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯ ಸಂಸತ್ ಭವನದ ಮೇಲಿನ ಉಗ್ರ ದಾಳಿಗೆ ಇಂದು 22 ವರ್ಷ ತುಂಬಿದ್ದು, ಇದೇ ದಿನ ಮತ್ತೊಂದು ಕರಾಳ ಘಟನೆಗೆ ನೂತನ ಸಂಸತ್ ಭವನ ಸಾಕ್ಷಿಯಾಗಿದೆ.
ಬಂಧಿತರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿ. ಈ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಹಳದಿ ಹೊಗೆ ಹೊರಸೂಸುವ ವಸ್ತುವನ್ನು ಹಿಡಿದು ಸದನದ ಒಳಗೆ ನುಗ್ಗಿದರು. ಈ ವೇಳೆ ಅವರಿಬ್ಬರನ್ನು ಕಂಡ ಸಂಸದರು ಸದನವನ್ನು ಬಿಟ್ಟು ಭಯದಿಂದ ಹೊರಗೆ ಓಡಿದರು. ಆರೋಪಿಗಳಿಬ್ಬರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದಿದ್ದಾರೆ ಎಂದು ಉಚ್ಛಾಟಿತ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಗಂಭೀರ ಆರೋಪ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಆಪ್ತ ಸಹಾಯಕ ಸಾಗರ್ ಶರ್ಮ ಹೆಸರಲ್ಲಿ ಇಬ್ಬರು ಆರೋಪಿಗಳು ಪಾಸ್ ಪಡೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲೂ ತಿಳಿದುಬಂದಿದೆ.
ಸರ್ವಾಧಿಕಾರತ್ವ ಮತ್ತು ಮಹಿಳೆಯ ಮೇಲಿನ ಅಪರಾಧಗಳನ್ನು ಸಹಿಸಲಾಗದು ಎಂದು ಆರೋಪಿಗಳು ಸಂಸತ್ತಿನ ಹೊರಭಾಗದಲ್ಲಿ ಘೋಷಣೆ ಸಹ ಕೂಗಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.