‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅನ್ನುವ ಗಾದೆ ಮಾತು ಬಂಟ್ವಾಳಕ್ಕೆ ಒಪ್ಪುವಂತದ್ದು. ಇಲ್ಲಿನ ಸರಕಾರದ ಶಕ್ತಿ ಕೇಂದ್ರವಾದ ತಾಲೂಕು ಆಡಳಿತ ಸೌಧದ ಮುಂದೆಯೇ ಅಕ್ರಮ ಕಟ್ಟಡ ತಲೆ ಎತ್ತಿ ನಿಂತಿದ್ದು, ಪ್ರಸ್ತುತ ಕಟ್ಟಡದಲ್ಲಿಯೇ ಸರಕಾರಿ ಸಂಸ್ಥೆಯೊಂದು ಅದೇ ರೀತಿ ಪ್ರೆಸ್ ಕ್ಲಬ್ ಕೂಡ ತಲೆ ಎತ್ತಿ ನಿಂತಿದೆ. ಪ್ರಶ್ನಿಸಬೇಕಾದವರೇ ಆ ಕಟ್ಟಡದಲ್ಲಿ ಕಚೇರಿ ತೆರೆದು ಕೂತಿರುವುದು ಬಂಟ್ವಾಳದ ದುರ್ದೈವ ಎಂದೇ ಹೇಳಬೇಕು.
ಬಡವನೊಬ್ಬ ಸಣ್ಣ ಮನೆಯೊಂದನ್ನು ನಿರ್ಮಿಸಿದರೆ ಗ್ರಾಮ ಪಂಚಾಯತ್ ನಿಂದ ನೀರು ಸರಬರಾಜು ಮಾಡಲು ಹಾಗೂ ವಿದ್ಯುತ್ ಇಲಾಖೆಯಿಂದ ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡದ ಅನುಮತಿ ಪತ್ರ ಕಡ್ಡಾಯ. ಒಂದು ವೇಳೆ ಇದು ಯಾವುದೂ ಇಲ್ಲದಿದ್ದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಲು ಸಾಧ್ಯವೇ ಇಲ್ಲವೆಂದು ಕಚೇರಿಯಿಂದ ಬಡವನಿಗೆ ಗೇಟ್ ಪಾಸ್ ಕೊಡುತ್ತಾರೆ ಅಧಿಕಾರಿ ವರ್ಗ.
ಆದರೆ ಬಂಟ್ವಾಳದ ಹೃದಯ ಭಾಗವಾದ ತಾಲೂಕು ಆಡಳಿತ ಸೌಧದ ಕೂಗಳತೆ ದೂರದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಅನುಮತಿ ಪಡೆಯದೇ ನಿರ್ಮಿಸಿರುವುದಾಗಿ ತಿಳಿದುಬಂದಿದೆ. ಇಷ್ಟು ದೊಡ್ಡ ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದರೂ, ಕಣ್ಣೆದುರಲ್ಲಿಯೇ ತಹಶೀಲ್ದಾರ್, ಕಂದಾಯ ನಿರೀಕ್ಷಕರ ಕಚೇರಿ ಇದ್ದರೂ, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಕೂಡ ಇಲ್ಲಿಯೇ ಸಮೀಪವೇ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸೋಜಿಗವೇ ಸರಿ. ಕಣ್ಣಮುಂದೆಯೇ ಇಂತಹ ಅಕ್ರಮ ನಡೆದರೂ ಯಾವುದೇ ಕ್ರಮ ಕೈಗೊಳ್ಳದ ಇಲ್ಲಿನ ಅಧಿಕಾರಿವರ್ಗದವರಿಂದ ಇನ್ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು. ಬಂಟ್ವಾಳದ ಸರಕಾರಿ ವ್ಯವಸ್ಥೆ ಯಾವ ರೀತಿ ಇದೆ ಅನ್ನುವುದಕ್ಕೆ ಹಿಡಿದ ಕೈ ಗನ್ನಡಿ. ಇದೇ ಕಟ್ಟಡದಲ್ಲಿ ವಾಣಿಜ್ಯ ಸಂಸ್ಥೆಗಳ ಜೊತೆಗೆ ಸರಕಾರಿ ಕಚೇರಿಯೊಂದು ತೆರೆದು ಕಾರ್ಯಾಚರಿಸುತ್ತಿದೆ. ಇಲ್ಲಿನ ಅವ್ಯವಸ್ಥೆ ಪ್ರಶ್ನಿಸಬೇಕಾದ ಮಾಧ್ಯಮಗಳು ಇದೇ ಕಟ್ಟಡದಲ್ಲಿ ಕಚೇರಿ ತೆರೆದು ಕೂತಿದೆ. ಇಲ್ಲಿ ಅನ್ಯಾಯವನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಬಡವರಿಗೊಂದು ನ್ಯಾಯ, ದೊಡ್ಡವರಿಗೊಂದು ನ್ಯಾಯವೇ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.