ದ್ರೌಪದಿಯ ಸೀರೆಯ ಅಪಹರಣಕ್ಕಿಂತಲೂ ಇದು ಕ್ರೂರ: ಹೈಕೋರ್ಟ್
ಮಗನ ಮೇಲಿನ ಸಿಟ್ಟಿಗೆ ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದ ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಥಳಿಸಿರುವ ಘಟನೆ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ‘ನಾವೆಲ್ಲಾ 21ನೇ ಶತಮಾನದಲ್ಲಿದ್ದೇವೆಯೊ ಅಥವಾ 17-18ನೇ ಶತಮಾನಕ್ಕೆ ವಾಪಸು ಹೋಗುತ್ತಿದ್ದೇವೆಯೊ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಪೊಲೀಸರ ಕೆಲಸ ತನಿಖೆ ಮಾಡುವುದಷ್ಟೇ ಅಲ್ಲ, ಘಟನೆಯನ್ನು ತಡೆಯುವುದೂ ಅವರ ಜವಾಬ್ದಾರಿಯಾಗಿರುತ್ತದೆ. ತಪ್ಪಿತಸ್ಥ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ರಾಜ್ಯದಲ್ಲಿ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಗಳು ಏನು ಮಾಡುತ್ತಿವೆ?’ ಎಂದು ಕಿಡಿ ಕಾರಿರುವ ನ್ಯಾಯಪೀಠ, ‘ಇಂತಹ ಘಟನೆಗಳು ನಡೆಯಬಾರದು’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ‘ಮುಂದಿನ ವಿಚಾರಣೆಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರು ಮತ್ತು ಬೆಳಗಾವಿ ಗ್ರಾಮಾಂತರ ಎಸಿಪಿ ತನಿಖಾ ವರದಿಯೊಂದಿಗೆ ಕೋರ್ಟ್‌ನಲ್ಲಿ ಖುದ್ದು ಹಾಜರಿರಬೇಕು’ ಎಂದು ಆದೇಶಿಸಿದೆ. ಘಟನೆಯ ಬಗ್ಗೆ ಅತ್ಯಂತ ನೋವಿನಿಂದ ನುಡಿದ ನ್ಯಾಯಪೀಠ, ‘ಘಟನೆಯ ಬಗ್ಗೆ ನಮಗೆ ಮಾತೇ ಹೊರಡದಂತಾಗಿದೆ. ಇದೊಂದು ನಾಚಿಕೆಗೇಡಿನ ವಿಚಾರ. ಇದನ್ನೆಲ್ಲಾ ನೋಡಿದರೆ ನಮ್ಮ ತಾಂತ್ರಿಕ ಮುನ್ನಡೆ, ಆರ್ಥಿಕ ಗಳಿಕೆಗೆ ಅರ್ಥವೇ ಇಲ್ಲ ಅನ್ನಿಸುತ್ತದೆ. ನಮ್ಮನ್ನು ನಾವು ಮನಷ್ಯರು ಎಂದು ಕರೆದುಕೊಳ್ಳಲಾಗದೇ ಹೋದರೆ ಎಲ್ಲವೂ ನಿಷ್ಫಲ’ ಎಂದು ಹೇಳಿತು.
‘ಸಂತ್ರಸ್ತ ಮಹಿಳೆಯನ್ನು ಮಧ್ಯರಾತ್ರಿ ಒಂದು ಗಂಟೆಗೆ ಮನೆಯಿಂದ ಹೊರಗೆ ಎಳೆದು ತಂದು ಕಂಬಕ್ಕೆ ಕಟ್ಟಿಹಾಕಿ ಎರಡು ಗಂಟೆಗಳ ಕಾಲ ಅಮಾನವೀಯ ವರ್ತನೆ ಮೆರೆಯಲಾಗಿದೆ. ಪ್ರಾಣಿಗಳಂತೆ ಆಕೆಯ ಮೇಲೆ ದಾಳಿ ನಡೆಸಲಾಗಿದೆ. ಇದು ಮನುಷ್ಯರು ನಡೆದುಕೊಳ್ಳುವ ರೀತಿಯೇ.? ಮನುಷ್ಯ ಇಷ್ಟೊಂದು ಕ್ರೂರಿಯಾಗಲು ಹೇಗೆ ತಾನೆ ಸಾಧ್ಯ.? ಇಂಥವರನ್ನು ಮನುಷ್ಯರು ಎನ್ನಲಿಕ್ಕೇ ನಾಚಿಕೆಯಾಗುತ್ತದೆ. ಇದೊಂದು ಅಮಾನವೀಯ ಮತ್ತು ಹೇಯ ಘಟನೆ’ ಎಂದು ಮಮ್ಮಲ ಮರುಗಿತು. ‘ಯುವಕ-ಯುವತಿಯೊಂದಿಗೆ ಅಥವಾ ಯುವತಿ-ಯುವಕನೊಂದಿಗೆ ಮನೆಬಿಟ್ಟು ಹೋಗುವ ವಿಚಾರ ಹಳ್ಳಿಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಇಂತಹ ಘಟನೆಗಳನ್ನು ಪೊಲೀಸರು ತಪ್ಪಿಸಬೇಕು. ಬೆಳಗಾವಿ ಜಿಲ್ಲೆಯ ಪೊಲೀಸರು ಪರಿಸ್ಥಿತಿ ಕೈಮೀರದಂತೆ ಎಚ್ಚರಿಕೆ ವಹಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿತು
ಪುರುಷ ಪ್ರಧಾನ ವ್ಯವಸ್ಥೆ ಎಷ್ಟು ಆಳವಾಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಆರೋಪಿಗಳು ಮಹಿಳೆಯ ಜೊತೆ ಅಮಾನವೀಯವಾಗಿ ನಡೆದುಕೊಳ್ಳುವ ಅಧಿಕಾರ ನೀಡಿದವರು ಯಾರು.? ಇದು ಮಾನಸಿಕ ಸಮಸ್ಯೆ ಇರಬಹುದೇ. ದ್ರೌಪದಿಯ ಸೀರೆಯ ಅಪಹರಣಕ್ಕಿಂತಲೂ ಇದು ಕ್ರೂರ. ಈ ಘಟನೆಯಿಂದ ಗ್ರಾಮದಲ್ಲಿನ ಇತರೆ ಮಹಿಳೆಯರಿಗೆ ಏನನ್ನಿಸಲಿದೆ.? ಸೂಕ್ಷ್ಮಮತಿ ಮಹಿಳೆಯರಲ್ಲಿ ಇದು ಸಹಜವಾಗಿಯೇ ಭಯ ಹುಟ್ಟಿಸಲಿದೆ. ಭಯಭೀತರು ಮುಂದೆ ತಮ್ಮ ಸುತ್ತಲಿನ ಸಮಾಜವನ್ನೇ ದ್ವೇಷಿಸಲಾರಂಭಿಸಬಹುದು.ಎಂದು ನ್ಯಾಯಾಧೀಶರು ಖಾರವಾಗಿ ನುಡಿದರು.