ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೌದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ವಿಡಿಯೋ ವೊಂದು ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಸೌದಿ ಅರೇಬಿಯಾದಲ್ಲಿ ಕುಳಿತು ಕಾಂಗ್ರೆಸ್ ಪ್ರಮುಖ ಮುಖಂಡರೊಬ್ಬರು ಹಾಗೂ ಮಂಗಳೂರು ಮೂಲದ ಪ್ರಮುಖ ಉದ್ಯಮಿಯೊಬ್ಬರ ಮೂಲಕ ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಅನ್ನುವ ಮಾತುಗಳು ಇದೀಗ ರಾಜಕೀಯ ವಲಯಗಳಿಂದ ಕೇಳಿ ಬರುತ್ತಿದೆ.
ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಮೊಹಿದ್ದೀನ್ ಬಾವಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ತನ್ನ ಕೆಲವು ಹಿಂಬಾಲಕರ ಮಾತು ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ತೊಡೆ ತಟ್ಟಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆದರೆ ಮೊಹಿದ್ದೀನ್ ಬಾವಾರಿಗೆ ಬೆರಳೆಣಿಕೆಯ ಮತಗಳಷ್ಟೇ ದೊರೆತಿತ್ತು. ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿ ಜಿಲ್ಲೆಯಲ್ಲಿ ನಾಯಕರಾಗಿ ಮೆರೆದು ತನ್ನ ಶಕ್ತಿ, ಸಾಮರ್ಥ್ಯ ತೋರಿಸುವ ಇರಾದೆ ಹೊಂದಿದ್ದ ಬಾವಾ ಎನಿಸಿದಂತೆ ಏನೂ ಆಗಲಿಲ್ಲ. ಇತ್ತ ಜೆಡಿಎಸ್ ಬಿಜೆಪಿಯೊಂದಿಗೆ ದೋಸ್ತಿ ಮಾಡಿದ ಪರಿಣಾಮ ಬಾವಾ ಇಕ್ಕಟ್ಟಿಗೆ ಸಿಲುಕುವಂತಾಯಿತು. ತನ್ನ ತಪ್ಪು ಹೆಜ್ಜೆಯಿಂದಾಗಿ ಕಳೆದ 15 ವರ್ಷಗಳಿಂದ ಸಂಪಾದಿಸಿದ ನಾಯಕತ್ವ, ಜನರ ಪ್ರೀತಿ ಎಲ್ಲಾ ಮಣ್ಣು ಪಾಲಾಯಿತು. ಇನ್ನೇನಿದ್ದರೂ ಕಾಂಗ್ರೆಸ್ ಗತಿ ಎಂದುಕೊಂಡಿರುವ ಬಾವಾರಿಗೆ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಲು ಬೇಕಾದ ತಂತ್ರಗಳನ್ನೆಲ್ಲಾ ಉದ್ಯಮಿ, ಆಪ್ತರ ಮೂಲಕ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವೇ ದಿನಗಳ ಹಿಂದೆ ಮಾಜಿ ಸಚಿವ ರಮಾನಾಥ ರೈ ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಜಾತ್ಯತೀತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ಇಟ್ಟರು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಾವಾ ಕೆಪಿಸಿಸಿ ಮಟ್ಟದ ಕಾಂಗ್ರೆಸ್ ಮುಖಂಡರನ್ನು ಒಲಿಸಿಕೊಳ್ಳಲು ತನ್ನ ಅತ್ಯಾಪ್ತರ ಮೂಲಕ ಗಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದು ಸಕ್ಸಸ್ ಆಗಿದೆ ಅನ್ನುವ ಮಾತುಗಳು ಇದೀಗ ಹರಿದಾಡುತ್ತಿದೆ.
ಇನ್ನು ಬಾವಾ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಣ ರಾಜಕಾರಣ ಗರಿಗೆದರಲಿದೆ ಅನ್ನುವ ಮಾತುಗಳು ಕೂಡಾ ಇದೆ. ಕ್ಷೇತ್ರದ ಕೆಲವು ಮುಖಂಡರು ಬಾವಾ ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಇದು ಯಾವ ಹಂತಕ್ಕೆ ತಲುಪಲಿದೆ ಅನ್ನುವ ಕುತೂಹಲವೂ ಮೂಡಿದೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ ಅನ್ನುವುದೇನೂ ಸರಿ. ಆದರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಕೈ ಮೇಲಾಗಲಿದೆ ಅನ್ನುವುದು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ.