ರಾಜ್ಯದ ಎಂಟು ಸಚಿವರು ಟಿಕೆಟ್ ರೇಸಿನಲ್ಲಿ.. ಆಪರೇಷನ್ ಹಸ್ತಕ್ಕೆ ಪ್ಲ್ಯಾನ್ ರೆಡಿ.!
ಎಲ್ಲವೂ ಅಂದುಕೊಂಡಂತೆ ನಡೆದರೆ ಚುನಾವಣೆಯ ಮೂರು ತಿಂಗಳ ಮೊದಲೇ ಕಾಂಗ್ರೆಸ್ ಲೋಕಸಭಾ ಸಮರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಈಗಿಂದೀಗಲೇ ಭರದ ಸಿದ್ಧತೆ ಮಾಡಿಕೊಳ್ಳತೊಡಗಿದೆ. ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಟಾರ್ಗೆಟ್ ಹೊಂದಿರುವ ಕಾಂಗ್ರೆಸ್ ಅದಕ್ಕಾಗಿ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ತಮ್ಮ ಅತ್ಯಾಪ್ತರಿಗೆ ಟಿಕೆಟ್ ನೀಡಲು ಮುಖಂಡರು ಕಸರತ್ತು ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದು, ಈ ರಾಜ್ಯಗಳಿಂದ ಹೆಚ್ಚಿನ ಸ್ಥಾನ ಗಳಿಸಿ ಬಿಜೆಪಿಗೆ ಟಕ್ಕರ್ ಕೊಡುವ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕಾಗಿ ಇಲ್ಲಿನ ಪ್ರಮುಖರೊಂದಿಗೆ ಚರ್ಚಿಸಿ ಯಾವುದೇ ಭಿನ್ನಮತ ಉಂಟಾಗದಂತೆ ಟಿಕೆಟ್ ಹಂಚಲು ತೀರ್ಮಾನಿಸಿದೆ.
ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಯಶಸ್ಸು ಪಡೆಯದೆ ಸೆಮಿ ಫೈನಲ್ ನಲ್ಲೇ ಮಕಾಡೆ ಮಲಗಿದೆ. ಗೆದ್ದು ಬೀಗಿದ ಬಿಜೆಪಿಗೆ ಫೈನಲ್ ನಲ್ಲಿ ಮುಟ್ಟಿ ನೋಡುವಂತಹ ಟೈಟ್ ಫೈಟ್ ನೀಡಬೇಕು ಅನ್ನುವ ದೃಷ್ಟಿಯಿಂದ ಜನವರಿ ಅಂತ್ಯದ ವೇಳೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರ್ಧಾರಕ್ಕೆ ಬರುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಪ್ರಮುಖ ನಾಯಕರಿಂದ ಮಾತುಗಳು ಕೇಳಿ ಬರುತ್ತಿದ್ದು, ಇಂದಿನಿಂದ (ಮಂಗಳವಾರದಂದು) ಮೂರು ದಿನಗಳ ಕಾಲ ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ, ಬಿಜೆಪಿ ವಿರುದ್ಧ ಕಾರ್ಯತಂತ್ರ, ಪ್ರಣಾಳಿಕೆ ಬಗೆಗೆ ವಿಶೇಷ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇನ್ನು ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಾಗಲೇ 20 ಸ್ಥಾನದ ಟಾರ್ಗೆಟ್ ಘೋಷಿಸಿದ್ದು ಅದಕ್ಕಾಗಿ ಪ್ಲ್ಯಾನ್ ಸಜ್ಜುಗೊಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವಿನ ಸಮನ್ವಯದ ಕೊರತೆಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದ್ದು, ಬಿಜೆಪಿಯೊಂದಿಗೆ ಈಗಾಗಲೇ ಅಂತರ ಕಾಯ್ದುಕೊಂಡಿರುವ ಪ್ರಮುಖ ನಾಯಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ವೇದಿಕೆ ಸಿದ್ಧವಾಗಿದೆ. ಕೆನರಾ ಕ್ಷೇತ್ರಕ್ಕೆ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ, ಬೆಂಗಳೂರು ಉತ್ತರಕ್ಕೆ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ತುಮಕೂರಿಗೆ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ನೀಡುವ ಬಗ್ಗೆ ಗಾಢವಾದ ಚರ್ಚೆ ನಡೆಯುತ್ತಿದೆ.
ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಲ್ಲವೇ ಅವರ ಪುತ್ರ ಸುನೀಲ್ ಬೋಸ್ ಹೆಸರು ಚರ್ಚೆಯಲ್ಲಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರೇ ಮುಂಚೂಣಿಯಲ್ಲಿದೆ. ಹಾಸನ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಶಿವರಾಂ, ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಮಿಥುನ್ ರೈ, ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಇಲ್ಲವೇ ವಿನಯ್ ಕುಮಾರ್ ಸೊರಕೆ, ಶಿವಮೊಗ್ಗ ಕ್ಷೇತ್ರದಲ್ಲಿ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್, ದಾವಣಗೆರೆ ಕ್ಷೇತ್ರಕ್ಕೆ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಚಿತ್ರದುರ್ಗಕ್ಕೆ ಎಚ್.ಆಂಜನೇಯ, ತುಮಕೂರಿನಲ್ಲಿ ಸಚಿವ ರಾಜಣ್ಣ, ಚಿಕ್ಕಬಳ್ಳಾಪುರಕ್ಕೆ ವೀರಪ್ಪಮೊಯಿಲಿ, ಬೆಂಗಳೂರು ಗ್ರಾಮಾಂತರಕ್ಕೆ ಹಾಲಿ ಸದಸ್ಯ ಡಿ.ಕೆ.ಸುರೇಶ್, ಬೆಂಗಳೂರು ದಕ್ಷಿಣಕ್ಕೆ ಸಚಿವ ಕೃಷ್ಣಬೈರೇಗೌಡ, ಬೆಂಗಳೂರುಕೇಂದ್ರಕ್ಕೆ ಸಚಿವ ಕೆ.ಜೆ.ಜಾರ್ಜ್, ಧಾರವಾಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಹಾವೇರಿ- ಗದಗಕ್ಕೆ ಮಾಜಿ ಶಾಸಕ ಡಿ.ಆರ್.ಪಾಟೀಲ್. ಬೆಳಗಾವಿಗೆ ಸಚಿವ ಸತೀಶ್ ಜಾರಕಿಹೊಳಿ, ಚಿಕ್ಕೋಡಿಗೆ ಮಾಜಿ ಶಾಸಕ ವಿವೇಕ ಪಾಟೀಲ್, ವಿಜಯಪುರಕ್ಕೆ ಮಾಜಿ ಶಾಸಕ ರಾಜು ಆಲಗೂರ, ಕಲಬುರಗಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೀದರ್‌ಗೆ ಮಾಜಿ ಶಾಸಕ ರಾಜಶೇಖರ ಪಾಟೀಲ್, ಬಳ್ಳಾರಿಗೆ ವಿ.ಎಸ್.ಉಗ್ರಪ್ಪ, ಬಾಗಲಕೋಟೆಗೆ ವೀಣಾ ಕಾಶಪ್ಪನವರ್ ಹೆಸರು ಮುಂಚೂಣಿಯಲ್ಲಿದೆ.
ಈ ಬಾರಿ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಉಳ್ಳ ಏಳೆಂಟು ಸಚಿವರಿಗೆ ಟಿಕೆಟ್ ಕೊಡುವ ಬಗ್ಗೆಯೂ ಚಿಂತನೆ ನಡೆದಿದ್ದು,ಇದರಲ್ಲಿ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಎಸ್.ಎಸ್.ಮಲ್ಲಿಕಾರ್ಜುನ, ರಾಜಣ್ಣ, ಕೆ.ಜೆ.ಜಾರ್ಜ್, ಶಿವಾನಂದ ಪಾಟೀಲ ಅವರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ. ಆಯಾ ಕ್ಷೇತ್ರದಲ್ಲಿ ಗೆದ್ದರೆ ಮುಂದೆ ಅವರ ಮಕ್ಕಳು ಇಲ್ಲವೇ ಕುಟುಂಬದವರಿಗೆ ವಿಧಾನಸಭೆಗೆ ಅವಕಾಶ ನೀಡುವ ಇರಾದೆಯೂ ಸ್ಥಳೀಯ ನಾಯಕರಲ್ಲಿದೆ.
ಈಗಾಗಲೇ ಸಿದ್ದರಾಮಯ್ಯ-ಡಿಕೆಶಿ ತಮ್ಮ ಅತ್ಯಾಪ್ತರ ಪಟ್ಟಿ ಸಿದ್ಧಪಡಿಸಿಕೊಂಡಿದ್ದು ಹೈಕಮಾಂಡ್ ಗೆ ರವಾನಿಸುವ ಸಿದ್ಧತೆಯಲ್ಲಿದ್ದಾರೆ. ಕುರುಬ ಸಮುದಾಯದವರಿಗೆ ಚಿಕ್ಕೋಡಿ, ಕೊಪ್ಪಳ, ದಾವಣಗೆರೆ, ಮೈಸೂರಿನಲ್ಲಿ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶ ಸಿದ್ದರಾಮಯ್ಯ ಅವರಿಗಿದೆ. ಇನ್ನು ಒಂದು ಇಲ್ಲವೇ ಎರಡು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಡಬಹುದು.
ಇತ್ತ ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದು, ಈರ್ವರಲ್ಲಿ ಒಬ್ಬರಿಗೆ ಟಿಕೆಟ್ ಫಿಕ್ಸ್ ಅನ್ನಲಾಗುತ್ತಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅಚ್ಚರಿಯ ಅಭ್ಯರ್ಥಿ ಆಯ್ಕೆ ಆಗಬಹುದು ಅನ್ನುವ ಸುದ್ದಿ ಕೇಳಿ ಬರುತ್ತಿದ್ದರೂ ಡಿಕೆಶಿ ಮತ್ತೊಮ್ಮೆ ತಮ್ಮ ಪರಮಾಪ್ತ ಮಿಥುನ್ ರೈ ಯವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮಟ್ಟದಲ್ಲಿ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ರಮಾನಾಥ ರೈ, ಯು.ಟಿ ಇಫ್ತಿಕಾರ್, ಇನಾಯತ್ ಅಲಿ, ಪದ್ಮರಾಜ್, ವಿವೇಕ್ ಪೂಜಾರಿ, ಹರೀಶ್ ಕುಮಾರ್, ರಕ್ಷಿತ್ ಶಿವರಾಂ ಹೆಸರು ಸ್ಥಳೀಯವಾಗಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಮಿಥುನ್ ರೈ ಹೆಸರೇ ಮುಂಚೂಣಿಯಲ್ಲಿದೆ. ಕೆಪಿಸಿಸಿ ವೀಕ್ಷಕರು ಮಂಗಳೂರಿಗೆ ಬಂದು ಸಭೆ ನಡೆಸಿ ಸ್ಥಳೀಯ ನಾಯಕರಿಂದ ಅಭ್ಯರ್ಥಿಗಳ ಮಾಹಿತಿ ಕಲೆ ಹಾಕಿದರೂ, ಸದ್ದು ಮಾಡದ ಮಿಥುನ್ ರೈ ಹೆಸರು ಈ ಬಾರಿಯೂ ಹೈಕಮಾಂಡ್ ಮಟ್ಟದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ. ವಿಶೇಷವೆಂದರೆ ಸ್ಥಳೀಯ ನಾಯಕರಿಗೆ ಅಚ್ಚರಿ ಎಂಬಂತೆ ಮಿಥುನ್ ರೈ ಹೆಸರು ಘೋಷಣೆ ಮಾಡುವ ಸಾಧ್ಯತೆಯೇ ಅಧಿಕವಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ವಿಪಕ್ಷ ನಾಯಕ ಸ್ಥಾನ ಒಕ್ಕಲಿಗರಿಗೆ ನೀಡಿದ್ದು, ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವಿಜಯೇಂದ್ರ ರಿಗೆ ನೀಡಿರುವ ಹಿಂದೆ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ಕೂಡ ಅಡಗಿದೆ. ಯಡಿಯೂರಪ್ಪ ರವರನ್ನು ಮೂಲೆಗುಂಪು ಮಾಡಿದ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳು ಬಿಜೆಪಿ ಕೈ ತಪ್ಪಿತ್ತು. ಆದರೆ ಇದೀಗ ವಿಜಯೇಂದ್ರ ಅಧ್ಯಕ್ಷರಾದ ಕಾರಣ ಲಿಂಗಾಯತ ಮತಗಳು ಮತ್ತೆ ಬಿಜೆಪಿ ಬುಟ್ಟಿಗೆ ಸೇರುತ್ತಾ ಅನ್ನುವ ಆತಂಕವೂ ಕಾಂಗ್ರೆಸ್ ಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಣಿಸಲು ಬೇಕಿರುವ ಎಲ್ಲಾ ರಣತಂತ್ರಗಳನ್ನು ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ. ಈ ಎಲ್ಲ ಅಂಶಗಳ ಮೇಲೆಯೇ ಪಕ್ಷದ ವರಿಷ್ಠರು ಸ್ಥಳೀಯ ನಾಯಕರೊಂದಿಗೆ ಚರ್ಚಿಸಲು ಮಂಗಳವಾರ ಸಭೆ ಆಯೋಜಿಸಿದ್ದಾರೆ.