ಆ ಬೆದರಿಕೆ ಕರೆ ಯಾರದ್ದು.? ಅನುಮಾನ ಹುಟ್ಟಿಸುವ ಕೆಲ ಸಂಗತಿಗಳು.!
ಇನ್ನೇನೂ ಎರಡು ತಿಂಗಳು ಕಳೆದಿದ್ದರೆ ಮದುವೆಯೆಂಬ ಮಧುಮಾಸಕ್ಕೆ ಕಾಲಿಡಬೇಕಾಗಿದ್ದ ಹದಿನೆಂಟರ ಕುವರಿ ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಬೊಳಿಯಾ ಎಂಬಲ್ಲಿ ನಿಗೂಢ ಆತ್ಮಹತ್ಯೆ ಪ್ರಕರಣ ನಡೆದಿದೆ. ಅಷ್ಟಕ್ಕೂ ಆತ್ಮಹತ್ಯೆಗೈದಾಕೆ ಹದಿನೆಂಟರ ಹರೆಯದ ಫಾತಿಮಾತುಲ್ ಆಶಿತಾ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಗೈದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಸಲಿಗೆ ಈ ಆತ್ಮಹತ್ಯೆ ಪ್ರಕರಣದಲ್ಲಿ ಹಲವಾರು ಅನುಮಾನ ಹುಟ್ಟಿಸುವ ಸಂಗತಿಗಳು ನಡೆದಿದ್ದು, ಸುಸೈಡ್ ಹಿಂದೆ ಬೇರೆಯದೇ ಕಾರಣ ಇರುವ ಬಗ್ಗೆ ಇದೀಗ ಸಾರ್ವಜನಿಕವಾಗಿ ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಸಾವಿನ ಸುತ್ತ ಇರುವ ಅನುಮಾನಗಳನ್ನು ಬಯಲಿಗೆ ಎಳೆಯುವಂತೆ ಸಾರ್ವಜನಿಕವಾಗಿ ಆಗ್ರಹಗಳು ಕೇಳಿ ಬರುತ್ತಿದೆ.
ಫಾತಿಮಾತುಲ್ ಆಶಿತಾ ಮೂಲತಃ ಮಂಗಳೂರು ಕುಳಾಯಿ ರಾಯಲ್ ಕಟ್ಟೆ ನಿವಾಸಿ. ಚಿಕ್ಕಂದಿನಲ್ಲೆ ತಂದೆಯನ್ನು ಕಳೆದುಕೊಂಡಿದ್ದ ನತದೃಷ್ಟೆ. ಆಶಿತಾಳ ತಾಯಿ ಬೇರೆ ಮದುವೆಯಾಗಿ ಹೊರಟು ಹೋದ ಕಾರಣ ಯಾರೂ ಆಶ್ರಯವಿಲ್ಲದೆ ಪರಡಾಡುವ ಪರಿಸ್ಥಿತಿ ಬಂತು. ನಿರ್ಗತಿಕಳಾದ ಆಶಿತಾ ಕುಪ್ಪೆಪದವು ಬೊಳಿಯಾದ ದೂರದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು. ಕೇಳುವವರು ಯಾರೂ ಇಲ್ಲದ, ಹದಿಹರೆಯದ ಯುವತಿ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿರುವ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗುತ್ತಿದೆ. ಇದೇ ಆಶಿತಾ ಕೆಲವು ಸಮಯಗಳ ಹಿಂದೆ ಫಿನಾಯಿಲ್ ಕುಡಿದು ಆತ್ಮಹತ್ಯೆ ಗೆ ಯತ್ನಿಸಿದ್ದಳಂತೆ. ಆದರೆ ಆಕೆ ಆ ಸಮಯದಲ್ಲಿ ಬದುಕಿ ಬಂದಿದ್ದಳು.
ಆಶಿತಾಳಿಗೆ ಕಳೆದ ಅಗಸ್ಟ್ ತಿಂಗಳಿನಲ್ಲಿ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆ ಕೂಡ ನಡೆಯುವ ಸಾಧ್ಯತೆ ಇತ್ತು. ಆಶಿತಾ ಆತ್ಮಹತ್ಯೆಗೈಯುವ ಕೆಲವು ಗಂಟೆಗಳ ಮೊದಲು ತಾನು ವಿವಾಹವಾಗುವ ಯುವಕನೊಂದಿಗೆ ಕುಪ್ಪೆಪದವಿನ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಒಟ್ಟಾಗಿ ಭಾಗವಹಿಸಿದ್ದಳು. ಪರಸ್ಪರ ಕುಶಲೋಪಚಾರಿ ಮಾತುಕತೆ ನಡೆಸಿದ್ದಳು. ಭಾವಿ ಗಂಡನ ಜೊತೆ ತಾನು ಅನುಭವಿಸಿರುವ ಕಿರುಕುಳ ಬಗ್ಗೆ ಸವಿವರವಾಗಿ ವಿವರಿಸಿದ್ದಳಂತೆ. ನಾನು ಇನ್ನೂ ಬದುಕಲ್ಲ ಎಂದೂ ಹೇಳಿದ್ದಳಂತೆ. ಅದಕ್ಕೆ ಭಾವಿ ಗಂಡ ಇನ್ನು ಎರಡು-ಮೂರು ತಿಂಗಳಲ್ಲಿ ಮದುವೆಯಾಗುತ್ತೇನೆ. ಅಲ್ಲಿಯವರೆಗೆ ಸ್ವಲ್ಪ ಕಾಯಿ. ಅವಸರ ಮಾಡಬೇಡ ಎಂದು ಭರವಸೆ ಕೂಡ ನೀಡಿ, ಸಮಾದಾನ ಪಡಿಸಿದ್ದನಂತೆ. ಆದಾಗಿ ಮನೆಗೆ ಬಂದ ಯುವತಿ ಕೆಲವೇ ಗಂಟೆಗಳ ಅಂತರದಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಶಿತಾ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನ ಇದ್ದುದರಿಂದ ಸ್ಥಳೀಯ ಯುವಕನೊಬ್ಬ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಮೃತ ಯುವತಿಗೆ ನ್ಯಾಯ ಒದಗಿಸಿ ಕೊಡುವಂತೆ ಪೊಲೀಸರಿಗೆ ಒತ್ತಡ ಹಾಕುತ್ತಿದ್ದರಿಂದ ಆ ವ್ಯಕ್ತಿಗೆ 8904961130 ನಂಬರಿನಿಂದ ಅನಾಮಿಕ ಬೆದರಿಕೆ ಕರೆ ಬಂದಿದ್ದು, ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ನೀನು ತಲೆ ಹಾಕಬಾರದು, ಪೊಲೀಸರಿಗೆ ಮಾಹಿತಿ ನೀಡಬಾರದು, ಒಂದು ವೇಳೆ ತಲೆ ಹಾಕಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಬಗ್ಗೆ ಯುವಕ ಬಜಪೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾನೆ.
ಆಶಿತಾ ಳದ್ದು ಸಹಜ ಆತ್ಮಹತ್ಯೆ ಪ್ರಕರಣವಾಗಿದ್ದರೆ, ಈ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ ಯುವಕನಿಗೆ ಕೊಲೆ ಬೆದರಿಕೆ ಯಾತಕ್ಕಾಗಿ.? ಇದೊಂದು ಆತ್ಮಹತ್ಯೆ ಪ್ರಕರಣವಲ್ಲ, ಇದರ ಹಿಂದೆ ಭಾರೀ ನಿಗೂಢತೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಸಾವಿನ ಹಿಂದಿನ ಹಕೀಕತ್ತನ್ನು ಬಯಲಿಗೆಳೆಯಬೇಕಿದೆ. ಆಶಿತಾಳ ಆತ್ಮ ನ್ಯಾಯಕ್ಕಾಗಿ ಮೊರೆಯಿಡುತ್ತಿದೆ.