✍️. ನವೀನ್ ಸೂರಿಂಜೆ, ಪತ್ರಕರ್ತ
ಮಂಗಳೂರಿನ ಹೆಜಮಾಡಿ- ಮಟ್ಟು ಎಂಬ ಪುಟ್ಟ ಗ್ರಾಮದಲ್ಲಿ ಮೊಗವೀರರು ಮತ್ತು ಬಿಲ್ಲವರು ಜಂಟಿಯಾಗಿ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ನಡೆಸುತ್ತಿದ್ದಾರೆ. ಶ್ರಮವನ್ನೇ ನಂಬಿ ಬದುಕುವ ಪ್ರಾಮಾಣಿಕ ಸಮುದಾಯವೊಂದನ್ನು ಕೋಮುವಾದಕ್ಕೆ ಬಳಸಿರುವ ಹಿಂದೂ ಜನಜಾಗೃತಿ ಸಮಿತಿಯು ‘ಹಿಂದೂಗಳೇ, ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಪ್ರತಿದಿನ ಒಂದು ಗಂಟೆ ನೀಡಿ’ ಎಂದು ಕರೆ ನೀಡಿದೆ. ಕರಾವಳಿಯ ಎಲ್ಲಾ ಜಾತಿ, ಧರ್ಮಗಳಿಗೆ ತಾಯಿಯಂತಹ ಸಮುದಾಯವಾಗಿರುವ ಮೊಗವೀರರ ಬೆವರನ್ನು ಕೋಮುದ್ವೇಷಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ !
ಮೊಗವೀರರ ‘ಶ್ರಮಧರ್ಮ’ವನ್ನು ರಕ್ಷಿಸಿದ್ದು ಬಪ್ಪ ಅಥವಾ ಬಬ್ಬರ್ಯ ಎಂಬ ಮುಸ್ಲೀಮನೇ ಹೊರತು ಹಿಂದೂ ಧರ್ಮದ ಪುರೋಹಿತಶಾಹಿ ವರ್ಗವಲ್ಲ. ಹಾಗಾಗಿಯೇ ಇಂದಿಗೂ ಮೊಗವೀರ ಮತ್ತು ಬ್ಯಾರಿ ಮುಸ್ಲೀಮರ ಮಧ್ಯೆ ಕಾಯಕ ಬದುಕಿನ ನಡುವೆ ಹಲವು ಅಲಿಖಿತ ಒಪ್ಪಂದಗಳಿವೆ. ಮುಸ್ಲೀಂ ಮುರುವ ಬ್ಯಾರಿ ಮತ್ತು ಹಿಂದೂವಾಗಿರುವ ಮುತ್ತು ಶೆಟ್ಟಿ ವಿವಾಹದಿಂದ ಹುಟ್ಟಿದ ಬೊಬ್ಬರ್ಯನು ಮೊಗವೀರರ ಆರಾಧ್ಯ ದೈವ. ಇದನ್ನು ಬೊಬ್ಬರ್ಯನ ಪಾಡ್ದನಗಳು ಹೇಳುತ್ತದೆ. ಪಾಡ್ದನಗಳನ್ನು ಕಾಲ್ಪನಿಕ ಎಂದು ವಾದ ಮಾಡುವುದಾರೆ, ಆ ದಿನಗಳಲ್ಲಿ ಬೊಬ್ಬರ್ಯ ದೋಣಿ ತಯಾರಿಸುವ ಮುಸ್ಲೀಮನಾಗಿದ್ದಿರಬಹುದು. ಆ ಕಾರಣಕ್ಕಾಗಿಯೇ ಮೊಗವೀರರಿಗೆ ಬದುಕು ಕಟ್ಟಿಕೊಟ್ಟ ಬೊಬ್ಬರ್ಯನನ್ನು ಪವಾಡಪುರುಷನಾಗಿ ಕಂಡು ದೈವವಾಗಿ ಆರಾಧನೆ ಮಾಡುತ್ತಿರಬಹುದು. ಮುಸ್ಲೀಮನಾಗಿದ್ದ ಬೊಬ್ಬರ್ಯ ಅಂದು ಮರ ಕಡಿದು ದೋಣಿ ನಿರ್ಮಾಣ ಮಾಡಿ ಮೊಗವೀರರಿಗೆ ನೀಡಿದ್ದರಿಂದಲೇ ಇಂದಿಗೂ ಮೀನು ಹಿಡಿಯುವಿಕೆ-ಮಾರಾಟದಲ್ಲಿ ಬ್ಯಾರಿ ಮತ್ತು ಮೊಗವೀರರ ಮಧ್ಯೆ ಯಾರೂ ಬೇರ್ಪಡಿಸಲಾಗದ ಸಂಬಂಧವಿದೆ.
ಹಿಂದೂ ಜನಜಾಗೃತಿ ಸಮಿತಿಯ ದ್ವೇಷ ಬಿತ್ತುವ ಈ ಕಾರ್ಯಕ್ರಮಕ್ಕೆ ಮೊಗವೀರರನ್ನೂ, ಬಿಲ್ಲವರನ್ನೂ ಒಟ್ಟುಗೂಡಿಸಲಾಗಿದೆ. ಬಿಲ್ಲವರು ಮತ್ತು ಮೊಗವೀರರು ಒಟ್ಟಾಗಬೇಕಾದುದು ಬೊಬ್ಬರ್ಯ ಪ್ರತಿನಿಧಿಸಿದ್ದ ಮುಸ್ಲಿಂ ಸಮುದಾಯದ ಪರ !
ಅಂದು ಮೊಗವೀರರ ಸಮುದಾಯದಲ್ಲಿ ಕ್ರಾಂತಿ ಮಾಡಿದ್ದ ಬೊಬ್ಬರ್ಯ ನೆಂಬ ಮುಸ್ಲೀಮ ಬಿಲ್ಲವರ ಬೈದ್ಯನಿಗೂ ಒಲಿದಿದ್ದ. ಕೃಷಿಕರಾಗಿದ್ದ ಬಿಲ್ಲವರ ಉಪಕಸುಬು ಆಗಿದ್ದ ಶೇಂದಿ ಇಳಿಸುವಿಕೆಯ ಸಮೃದ್ದಿಯಲ್ಲೂ ಬೊಬ್ಬರ್ಯನ ಪಾತ್ರವಿದೆ. ಆ ಕಾರಣಕ್ಕಾಗಿಯೇ ಬೊಬ್ಬರ್ಯನಿಗೆ ಮೊದಲ ಗುಡಿ ಕಟ್ಟಿದ್ದು ಪೊಂಗದರ ಬೈದ್ಯ ನೆಂಬ ಬಿಲ್ಲವ!
ಈಗ ಬಿಲ್ಲವರು ಮತ್ತು ಮೊಗವೀರರು ಸೇರಿಕೊಂಡು ಬೊಬ್ಬರ್ಯನ ಸಮುದಾಯವನ್ನು ದ್ವೇಷಿಸುವುದು ಯಾವ ಧರ್ಮ ? ಹಿಂದೂ ಜನಜಾಗೃತಿ ಸಮಿತಿಯ ಈ ದ್ವೇಷದ ರಾಜಕಾರಣಕ್ಕೆ ಬೊಬ್ಬರ್ಯನ ಮಡಿಲಲ್ಲಿರುವ ಬಿಲ್ಲವರು ಮತ್ತು ಮೊಗವೀರರು ಬಳಕೆಯಾಗಬಾರದು ಅಲ್ಲವೇ ? ಮಟ್ಟುವಿನಂತಹ ಸುಂದರ ಊರಲ್ಲಿ ಬೊಬ್ಬರ್ಯ ವಿರೋಧಿ ಸಿದ್ದಾಂತದ ಕಾರ್ಯಕ್ರಮಗಳು ನಡೆಯಬೇಕೇ ? ಸಮುದಾಯಗಳು ”ದೈವಧರ್ಮ”ವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕಲ್ಲವೇ ?