ಮಂಗಳೂರು: ಲಾಡ್ಜ್ ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಕರಾವಳಿ

ಹೇಳಿ ಕೇಳಿ ಇದು ಸ್ಮಾರ್ಟ್ ಮಂಗಳೂರು. ಇಲ್ಲಿ ಏನುಂಟು.. ಏನಿಲ್ಲ? ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರೆ ಸಾಕು ರೋಡ್ ವೇಶ್ಯೆಯರು ಗಿರಾಕಿಗಳನ್ನು ಕೈ ಸನ್ನೆ ಮೂಲಕ ಸೆಟ್ ಮಾಡಿಕೊಳ್ಳುವ ದಂಧೆ ಒಂದು ಕಡೆಯಾದರೆ, ಇನ್ನು ರಾತ್ರಿಯಾಗುತ್ತಿದ್ದಂತೆ ಮಂಗಳಮುಖಿಯರ ಆರ್ಭಟ ಜೋರಾಗಿ ನಡೆಯುತ್ತಿದೆ.

ಇದರ ಜೊತೆಗೆ ಬೀಗ ಹಾಕಿ ಕೂತಿದ್ದ ಲಾಡ್ಜ್ ಗಳಲ್ಲಿನ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮತ್ತೆ ಚಿಗುತುಕೊಂಡು ಬಾಗಿಲು ತೆರೆದಿದೆ. ಮಂಗಳೂರು ನಗರದ ಪ್ರಮುಖ ಲಾಡ್ಜ್ ಗಳಲ್ಲಿ ಲಾಲನೆಯರನ್ನು ಇಟ್ಟು ಬ್ಯುಸಿನೆಸ್ ಮಾಡುವ ಕರಾಳ ದಂಧೆ ಇದೀಗ ಮತ್ತೆ ಆರಂಭಗೊಂಡಿದ್ದು, ನಗರದ ಹೆಸರನ್ನು ಕುಲಗೆಡಿಸುತ್ತಿದೆ. ಕೆಲವು ಸಮಯ ಹಿಂದೆ ಈ ದಂಧೆಗೆ ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಮತ್ತೆ ಆರಂಭಗೊಂಡಿದ್ದು, ಪೊಲೀಸ್ ಇಲಾಖೆ ಮೌನವಹಿಸಿದೆ ಅನ್ನುವ ಮಾತುಗಳು ಕೇಳಿ ಬರತೊಡಗಿದೆ.

ಬಣ್ಣ ಬಣ್ಣದ ಹುಡುಗಿಯರನ್ನು ಇಟ್ಟು ಮಾಂಸ ದಂಧೆ ನಡೆಸುವ ಹಲವು ಲಾಡ್ಜ್ ಗಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ಸ್ಟೇಟ್ ಬ್ಯಾಂಕ್ ಬಳಿ, ಸರ್ವಿಸ್ ಬಸ್ ಸ್ಟ್ಯಾಂಡ್ ಎದುರುಗಡೆ ಒಳ ರಸ್ತೆಯ ಹೆಸರಾಂತ ಲಾಡ್ಜ್ ನಲ್ಲಿ ಹಾಗೂ ನಗರದ ಕೆಲವು ಲಾಡ್ಜ್ ಗಳಲ್ಲಿ ನಡೆಯುತ್ತಿರುವುದು ಅಪ್ಪಟ ಚರ್ಮದಂಧೆ. ಹೊರ ರಾಜ್ಯದ ಹುಡುಗಿಯರು ಇಲ್ಲಿ ಇಂತಿಷ್ಟು ರೇಟ್ ಗೆ ಫಿಕ್ಸ್. ಈ ಹಿಂದೆ ಹಲವು ಬಾರಿ ಪೊಲೀಸ್ ದಾಳಿ ನಡೆದರೂ ಮತ್ತೆ ಮತ್ತೆ ಆರಂಭವಾಗುತ್ತಿದೆ. ಇದೊಂದೇ ಅಲ್ಲ. ಮಂಗಳೂರಿನ ಹಲವು ಭಾಗಗಳಲ್ಲಿ ಇಂತಹ ವೇಶ್ಯಾದಂಧೆಯ ಲಾಡ್ಜ್ ಗಳು ಕಾರ್ಯಾಚರಿಸುತ್ತಿದೆ. ಕೆಲವು ರಿಕ್ಷಾ ಚಾಲಕರು ಗಿರಾಕಿಗಳನ್ನು ಕರೆದುಕೊಂಡು ಇಲ್ಲಿಗೆ ಬಿಡುತ್ತಾರೆ. ಅವರಿಗೆ ಒಬ್ಬ ಗಿರಾಕಿ ತಂದದ್ದಕ್ಕೆ ಇಂತಿಷ್ಟು ರೇಟ್ ಫಿಕ್ಸ್ ಇದೆ.

ಮಂಗಳೂರ ಹೆಸರನ್ನು ಕುಲಗೆಡಿಸುತ್ತಿರುವ ಇಂತಹ ಅಕ್ರಮ ದಂಧೆಗೆ ಮೂಗುದಾರ ಹಾಕುವ ಕೆಲಸ ನಡೆಯಬೇಕಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ. ಮಂಗಳೂರು ಪೊಲೀಸ್ ಆಯುಕ್ತರು ಇಂತಹ ಕರಾಳ ದಂಧೆಯನ್ನು ಮಟ್ಟ ಹಾಕುವ ಕೆಲಸ ಮಾಡಬೇಕಾಗಿದೆ.