ಉಡುಪಿ: ಪಡುಬಿದ್ರಿ, ಪಲಿಮಾರು, ನಂದಿಕೂರು ಪರಿಸರದಲ್ಲಿ ಸುಜ್ಲಾನ್ ಎನರ್ಜಿ ಇಂಡಿಯಾ ಪ್ರೈ ಲಿಮಿಟೆಡ್ ಗಾಗಿ ಕೆಐಎಡಿಬಿಯಿಂದ ಮಂಜೂರಾದ 1200 ಎಕರೆ ಜಮೀನನ್ನು ಖಾಸಗಿ ಕಂಪೆನಿ ಮತ್ತು ವ್ಯಕ್ತಿಗಳಿಗೆ ಮಾರಾಟ ಮಾಡುವ ಹುನ್ನಾರ ಮತ್ತು ಸರಕಾರಿ ಜಮೀನು ಉಳಿಸುವ ಹಾಗೂ ಭೂ ಅವ್ಯವಹಾರದ ವಿರುದ್ಧ ಪಡುಬಿದ್ರಿ ಸುಜ್ಲಾನ್ ಗೇಟ್ ಬಳಿ ಶನಿವಾರ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆ, ಪಡುಬಿದ್ರಿಯಲ್ಲಿ ನಡೆಯುತ್ತಿರುವ ’ಭೂ’ ಮಾಫಿಯಾದಿಂದ ಸರಕಾರಿ ಜಮೀನು ಖಾಸಗಿಯವರ ಪಾಲಾಗುತ್ತಿದೆ. ಇದನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಮರಳಿ ಪಡೆಯಬೇಕು, ನಂದಿಕೂರು ದೇವರ ಕಾಡು ಉಳಿಸಿ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪಲಿಮಾರು ಕಿಂಡಿ ಅಣೆಕಟ್ಟುವಿನಿಂದ ಸುಜ್ಲಾನ್ ಪ್ರಾಯೋಜಿತ ಎಂ 11 ಕಂಪೆನಿಗೆ ನೀರು ಸರಬರಾಜು ಆಗುತ್ತಿರುವುದನ್ನು ತಡೆಹಿಡಿದು ನೀರು ಉಳಿಸುವಂತೆ, ಹೆಜಮಾಡಿ ಟೋಲ್ ಗೇಟ್ ನಲ್ಲಿ ಸ್ಥಳೀಯ ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ನಾಗರಿಕರಿಗೆ ಉಚಿತ ಸಂಚಾರ, ಕಂಚಿನಡ್ಕ – ಪಡುಬಿದ್ರಿಯಲ್ಲಿ ಟೋಲ್ ಗೇಟ್ ಸ್ಥಾಪನೆ ಹುನ್ನಾರ ವಿರುದ್ಧ ಮತ್ತು ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ನಡೆಯುತ್ತಿರುವ ಕಾಮಗಾರಿಯಲ್ಲಿನ ಅವ್ಯಹಾರ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು. ಕೇಂದ್ರ ಸರಕಾರಕ್ಕೆ ಸಂಬಂಧ ಪಟ್ಟ ವಿಚಾರದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಸಮಸ್ಯೆ ನಿವಾರಣೆಗೆ ಮನವಿ ಮಾಡಲಾಗುವುದು ಎಂದರು.
ಕರಾವಳಿಯಲ್ಲಿ ಬಿಜೆಪಿ ಗೆದ್ದ ನಂತರ ಜನರ ನಿರೀಕ್ಷೆಗಳು ಹುಸಿಯಾಗಿವೆ. ಸುಜ್ಲಾನ್, ಯುಪಿಸಿಎಲ್, ನಾಗಾರ್ಜುನ ಸಂಸ್ಥೆಗಾಗಿ ಜಾಗ ಕೊಟ್ಟವರಿಗೆ ಉದ್ಯೋಗವೂ ಇಲ್ಲ, ನೆರವೂ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಂತೂ ಇವರ ಸಿ.ಎಸ್.ಆರ್ ಅನುದಾನಗಳು ಸಿಗುವುದೇ ಅಪರೂಪವಾಗಿದೆ. ಜನವಿರೋಧಿಯಾಗಿರುವ ಹೋರಾಟಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನತೆಯೂ ಒಂದಾಗಬೇಕಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಮರೆತು ಎಲ್ಲರೂ ಕೈಜೋಡಿಸೋಣ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶಮಂತ್, ಪಕ್ಷದ ಪ್ರಮುಖರಾದ ಉದಯ ಶೆಟ್ಟಿ ಮುನಿಯಾಲು, ಎಂ. ಎ. ಗಪೂರ್, ಪ್ರತಿಭಾ ಕುಳಾಯಿ, ಸುಧೀರ್ ಕುಮಾರ್ ಮುರೋಳಿ, ಐವನ್ ಡಿ.ಸೋಜ, ಪ್ರತಿಭಾ ಕುಳಾಯಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮೊದಲಾದವರು ಮಾತನಾಡಿದರು.
ಕಾಪು ಬ್ಲಾಕ್ ಕಾಂಗ್ರೆಸ್, ಉಡುಪಿ ಜಿಲ್ಲಾ ಕಾಂಗ್ರೆಸ್, ವಿವಿಧ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.