ಡೆತ್ ನೋಟ್ ನಲ್ಲಿ ಹೆಸರಿದ್ದ ತಕ್ಷಣ ಅಪರಾಧಿ ಎಂಬ ತೀರ್ಮಾನಕ್ಕೆ ಬರಲಾಗದು: ಹೈಕೋರ್ಟ್ ಕಲಬುರ್ಗಿ ಪೀಠ

ರಾಜ್ಯ

ಡೆತ್ ನೋಟ್‌ನಲ್ಲಿ ವ್ಯಕ್ತಿಯ ಹೆಸರಿದ್ದಾಕ್ಷಣ ಆತ ಅಪರಾಧಿಯೆಂಬ ತೀರ್ಮಾನಕ್ಕೆ ಒಮ್ಮೆಲೇ ಬರಲಾಗದು. ನಿಜವಾಗಿಯೂ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬ ಬಗ್ಗೆ ಪೂರ್ಣವಾದ ತನಿಖೆ ಅತ್ಯಗತ್ಯ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಶಿಕ್ಷಕ ಬಸವರಾಜ್‌ ಆತ್ಮಹತ್ಯೆ ಪ್ರಕರಣದಲ್ಲಿಆರೋಪ ಎದುರಿಸುತ್ತಿದ್ದ ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಹನುಮಂತರಾಯಪ್ಪ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ವೆಂಕಟೇಶ್‌ ಟಿ.ನಾಯಕ್‌ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.

ಆತ್ಮಹತ್ಯೆ ಪ್ರಕರಣಗಳಲ್ಲಿಸಿಗುವ ಸೂಸೈಡ್‌ ನೋಟ್‌ಗಳಲ್ಲಿ ಕೆಲವು ಸಲ ವ್ಯಕ್ತಿಯ ಹೆಸರು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್‌ನಲ್ಲಿನ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಅಪರಾಧ ಎಸಗಿದ್ದಾರೆನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಮಾಮೂಲಿಯಾಗಿದೆ. ಸೂಸೈಡ್‌ ನೋಟ್‌ನಲ್ಲಿನ ಅಂಶಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ನಿಜವಾಗಿಯೂ ಆತ್ಮಹತ್ಯೆಗೆ ಆ ವ್ಯಕ್ತಿ ಪ್ರಚೋದನೆ ನೀಡಿದ್ದಾನೋ ಇಲ್ಲವೋ
ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಸತ್ಯಾಂಶ ಅರಿಯಲು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆ, ಎರಡೂ ನಡೆಯಬೇಕಾಗುತ್ತದೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಂದು ವೇಳೆ ಐಪಿಸಿ ಸೆಕ್ಷನ್‌ 306 ಅನ್ವಯಿಸಬೇಕಾದರೆ, ಆತ್ಮಹತ್ಯೆಗೆ ಪ್ರಚೋದನೆಯೇ ಮುಖ್ಯ ಕಾರಣವೆಂದು ದೃಢಪಡಬೇಕು. ಅನ್ಯ ದಾರಿಯಲ್ಲದೆ ಮೃತರು ಆತ್ಮಹತ್ಯೆ ಹಾದಿ ಹಿಡಿದರೆಂದು ಸಾಬೀತುಪಡಿಸಬೇಕಾಗುತ್ತದೆ ಎಂದೂ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

2022ರ ಮೇ ತಿಂಗಳಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಜಿಎನ್‌ ಪಾಟೀಲ್‌ ಅವರಿಗೆ ಕ್ಲಸ್ಟರ್‌ ಸಂಪನ್ಮೂಲ ಕೇಂದ್ರದ ಸಮನ್ವಯಕಾರರಾಗಿ ಬಡ್ತಿ ನೀಡಿದ ನಂತರ ಬಸವರಾಜ್‌ ಅವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2023ರ ಫೆಬ್ರವರಿ 12ರಂದು ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಪೊಲೀಸರಿಗೆ ದೂರು ನೀಡಿದ್ದ ಮೃತರ ಪತ್ನಿ ಮಹಾದೇವಿ, ತಮ್ಮ ಪತಿ ಪಾಟೀಲ್‌ ಅವರು ಮುಖ್ಯೋಪಾಧ್ಯಾಯರಾಗಿದ್ದಾಗ ಯಾವುದೇ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ ಎಂದು ಬಿಇಒ ಹನುಮಂತರಾಯಪ್ಪ ನೋಟಿಸ್‌ ಮೇಲೆ ನೋಟಿಸ್‌ ನೀಡುತ್ತಿದ್ದರು. ಅದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಪತಿ ಆತ್ಮಹತ್ಯೆಗೂ ಮುನ್ನ ಬರೆದಿದ್ದ ನೋಟ್‌ನಲ್ಲಿ ಜಿಎನ್‌ ಪಾಟೀಲ್‌ ಹಾಗೂ ಹನುಂತರಾಯಪ್ಪ ಅವರ ಹೆಸರನ್ನು ಉಲ್ಲೇಖಿಸಿದ್ದರು ಎಂದು ಆರೋಪಿಸಿದ್ದರು.