ಮದುವೆ ಎಂಬುದು ಗೌರವ, ನಂಬಿಕೆ, ವಿಶ್ವಾಸದ ಮೇಲೆ ನಿರ್ಮಿತವಾಗಿದೆ. ಪತಿ-ಪತ್ನಿ ಪರಸ್ಪರ ದೂಷಣೆ, ಅಗೌರವದಿಂದ ವರ್ತಿಸುವುದು ಅಕ್ಷಮ್ಯ ಅಪರಾಧ: ದೆಹಲಿ ಹೈಕೋರ್ಟ್

ಕರಾವಳಿ

“ಸುಳ್ಳು ಆರೋಪಗಳ ಮೂಲಕ ಸಾರ್ವಜನಿಕವಾಗಿ ಪತಿಯನ್ನು ನಿಂದಿಸುವುದು, ಸ್ತ್ರೀಲೋಲ ಎಂದು ಪಟ್ಟ ಕಟ್ಟುವ ಪತ್ನಿಯ ನಡವಳಿಕೆ ಕ್ರೌರ್ಯದ ಪರಮಾವಧಿ” ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆರು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್, ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠ “ಮದುವೆ ಎಂಬುದು ಗೌರವ, ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿರ್ಮಿತವಾಗಿದೆ. ಪತಿಯಾಗಲಿ, ಪತ್ನಿಯಾಗಲಿ ಪರಸ್ಪರ ದೂಷಣೆ ಮಾಡುತ್ತಾ ಅಗೌರವದಿಂದ ವರ್ತಿಸುವುದು ಅಕ್ಷಮ್ಯ ಅಪರಾಧ” ಎಂದು ಹೇಳಿದೆ.

ಸಂಗಾತಿಯ ಬಗ್ಗೆ ಆಧಾರರಹಿತ ಆರೋಪ, ಮಾನಹಾನಿಕರ ಹೇಳಿಕೆ ನೀಡುವ ಮೂಲಕ ಕಳಂಕ ಉಂಟು ಮಾಡುವುದು ಕ್ರೌರ್ಯದ ಕೃತ್ಯಕ್ಕೆ ಸಮಾನವಾದುದು ಎಂದು ನ್ಯಾಯಪೀಠ ಹೇಳಿದೆ.

ಕೆಳ ನ್ಯಾಯಾಲಯ ನೀಡಿದ ವಿಚ್ಛೇದನ ತೀರ್ಪು ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್ “ಮದುವೆ ಎಂಬ ಸುಂದರ ಸಾಂಸಾರಿಕ ಬದುಕು ಯಶಸ್ವಿಯಾಗಲು ದಂಪತಿ ಪರಸ್ಪರ ನಂಬಿಕೆ, ಗೌರವದಿಂದ ನಡೆದುಕೊಳ್ಳಬೇಕು. ವೈವಾಹಿಕ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಯಾವ ಸಂಬಂಧಗಳು ಗಟ್ಟಿಯಾಗಿ ನಿಲ್ಲುವುದಿಲ್ಲ. ಸುಳ್ಳಿನ ಸೌಧದ ಮೇಲೆ ಸಂಬಂಧಗಳನ್ನು ಉಳಿಸಿಕೊಳ್ಳಲಾಗದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.