ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ
✍️. ನವೀನ್ ಸೂರಿಂಜೆ,ಪತ್ರಕರ್ತ
“ದಿನಕ್ಕೊಬ್ಬ ಗಂಡ” – ಸನಾತನ ಧರ್ಮದೊಳಗಿನ ಮಹಿಳಾ ದೌರ್ಜನ್ಯದ ಈ ಪಿಡುಗು ಮತ್ತು ಅದರ ವಿರುದ್ದದ ಬಂಡಾಯ ಚರಿತ್ರೆಯೇ ದೊಡ್ಡದಿದೆ. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ : ಪರ್ಮನೆಂಟ್ ಗಂಡನೇ ಇಲ್ಲ’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕೇವಲ ರಾಜಕೀಯ ಹಿನ್ನಲೆ ಹೊಂದಿದೆಯೇ ಹೊರತು ಮುಸ್ಲಿಮರ ಧಾರ್ಮಿಕ, ಸಾಮಾಜಿಕ ಇತಿಹಾಸದಲ್ಲಿ ಅಂತಹ ಕುರುಹುಗಳಿಲ್ಲ. ಆದರೆ ಸಂವಿಧಾನ ಜಾರಿಯಾಗುವ ಮೊದಲು ಹಿಂದೂ ಸಮಾಜದಲ್ಲಿ ‘ದಿನಕ್ಕೊಬ್ಬ ಗಂಡ’ ಪಿಡುಗು ಈ ನೆಲದ ಕಾನೂನೆಂಬಂತೆ ಜಾರಿಯಲ್ಲಿತ್ತು.
ದ್ರೌಪದಿಗೆ ಐದು ಗಂಡಂದಿರು ಸೇರಿದಂತೆ ಪುರಾಣ, ಧಾರ್ಮಿಕ ಕತೆಗಳಲ್ಲಿ ಬರುವ ದಿನಕ್ಕೊಬ್ಬರು ಗಂಡಂದಿರ ನೂರಾರು ಕತೆಯನ್ನು ಬದಿಗಿಡೋಣಾ. ತೀರಾ ಇತ್ತಿಚೆಗೆ, ಅಂದರೆ ನಮ್ಮ ಹಿಂದಿನ ತಲೆಮಾರು ಅನುಭವಿಸಿದ ಸಂಕಟಗಳನ್ನೊಮ್ಮೆ ಅವಲೋಕಿಸಿ. ಭಾರತದಲ್ಲಿ ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಭಾರತದ ಹಲವು ಹಳ್ಳಿಗಳಲ್ಲಿ ಹಿಂದುಳಿದ ವರ್ಗದ ಯುವಕರು ಮದುವೆಯಾದ ಮೊದಲ ದಿನ ವಧುವನ್ನು ಜಮೀನ್ದಾರರ ಮನೆಗೆ ಬಿಟ್ಟು ಬರಬೇಕು ಎಂಬ ನಿಯಮವಿತ್ತು. ಈ ನಿಯಮದ ವಿರುದ್ದ ಬಂಡಾಯ, ಹಿಂಸೆಗಳೇ ನಡೆದ ಇತಿಹಾಸ ಈ ನೆಲದಲ್ಲಿದೆ.
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ. ತೆಲಂಗಾಣ, ಆಂಧ್ರದ ಹಲವು ಹಳ್ಳಿಗಳಲ್ಲಿರುವ ತೀರಾ ಹಿಂದುಳಿದ ವರ್ಗಗಳ ಮನೆಗೆ ಕೆಲಸ ಮುಗಿಸಿ ಬಂದ ಗಂಡ, ತನ್ನದೇ ಮನೆಯ ಹೊರಗೆ ಜಮೀನ್ದಾರನ ಚಪ್ಪಲಿ ಕಂಡರೆ ವಾಪಸ್ ಹೋಗಬೇಕಿತ್ತು. ಒಂದೆರಡು ತಾಸು ಬಿಟ್ಟು ವಾಪಸ್ ಬಂದಾಗ ಮನೆ ಎದುರು ಜಮೀನ್ದಾರರ ಚಪ್ಪಲಿ ಇದ್ದರೆ ಮತ್ತೆ ವಾಪಸ್ ಹೋಗಬೇಕಿತ್ತು. ಹಿಂದೂ ಸಮಾಜದೊಳಗೆ ನಡೆಯುತ್ತಿದ್ದ ಈ ದೌರ್ಜನ್ಯವನ್ನು ವಿರೋಧಿಸಿದ್ದು ನಕ್ಸಲರು ಮಾತ್ರ. ಆ ಕಾರಣಕ್ಕಾಗಿಯೇ ಆಂಧ್ರ, ತೆಲಂಗಾಣದ ಹಲವು ಹಳ್ಳಿಗಳು ಬೇಷರತ್ತಾಗಿ ನಕ್ಸಲ್ ಚಳವಳಿಯನ್ನು ಬೆಂಬಲಿಸಿದವು.
“ನಾನು ಆಂಧ್ರದ ಹಲವು ಹಳ್ಳಿಗಳಲ್ಲಿ ಹಿಂದುಳಿದ-ಬುಡಕಟ್ಟು ಸಮುದಾಯದ ಅಧ್ಯಯನ ನಡೆಸಿದ್ದೇನೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜಮೀನ್ದಾರರು ಶೂದ್ರರ ಕಾಲನಿಗಳಿಗೆ ತಮಗೆ ಬೇಕಾದಾಗ ಹೋಗಿ ಸುಂದರವಾಗಿದ್ದ ಮಹಿಳೆಯರ ಜೊತೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಈ ದೌರ್ಜನ್ಯದ ಸಮಯದಲ್ಲಿ ಮನೆ ಮಂದಿ ಮನೆಯಿಂದ ಹೊರಗೆ ನಿಂತು ಜಮೀನ್ದಾರರಿಗೆ ಸಹಕರಿಸಬೇಕು. ಈಗಲೂ ಈ ಪದ್ಧತಿ ಕೆಲವು ಹಳ್ಳಿಗಳಲ್ಲಿ ಇದೆ. ನಕ್ಸಲರು ಮತ್ತು ಕಮ್ಯುನಿಸ್ಟರನ್ನು ಹೊರತುಪಡಿಸಿ ಬೇರೆ ಯಾರೂ ಕೂಡಾ ಇದರ ವಿರುದ್ದ ಮಾತನಾಡುವುದಿಲ್ಲ” ಎನ್ನುತ್ತಾರೆ ಹಿರಿಯ ನ್ಯಾಯವಾದಿ ಎಸ್ ಬಾಲನ್.
ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡಂದಿರನ್ನು ಕೊಟ್ಟ ಪ್ರಧಾನಿಗಳು ಮತ್ತು ಅದನ್ನು ಬೀದಿಯಲ್ಲಿ ನಿಂತು ಕೆಟ್ಟದಾಗಿ ಆಡಿಕೊಳ್ಳುವ ಆರ್‌ಎಸ್‌ಎಸ್, ಹಳ್ಳಿಗಳ ಈ ದುರಂತ ಕಥನಕ್ಕೆ ಅಂತ್ಯ ಹಾಡಲು ಏನಾದರೂ ಮಾಡಿದ್ದಾರೆಯೇ? ನೀವು ದೇಶದ್ರೋಹಿಗಳು ಎಂದು ಕರೆಯುವ ನಕ್ಸಲರು ಮತ್ತು ಕಮ್ಯುನಿಸ್ಟರೇ ಈ ಹಿಂದೂ ಮಹಿಳೆಯರಿಗೆ ಪರ್ಮನೆಂಟ್ ಗಂಡನಿರಬೇಕು ಎಂದು ಹೋರಾಡಿ ನ್ಯಾಯ ಒದಗಿಸಿದವರು.
ಹರಿಯಾಣದಲ್ಲಿ ಇತ್ತೀಚೆಗೆ ‘ವಧು ಕಳ್ಳಸಾಗಾಣಿಕೆ’ ಬಗ್ಗೆ ವರದಿಯಾಗಿತ್ತು. ದೇಶದ ಬೇರೆ ಬೇರೆ ರಾಜ್ಯಗಳಿಂದ ‘ಮದುಮಗಳ’ನ್ನು ಹರಿಯಾಣಕ್ಕೆ ತರಿಸಿಕೊಂಡು ‘ಒಂದಕ್ಕಿಂತ ಹೆಚ್ಚು ಗಂಡಂದಿರಿಗೆ ಹಂಚಲಾಗುತ್ತಿತ್ತು’ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಈ ವಧುಗಳ ಪೈಕಿ ಒಬ್ಬರೇ ಒಬ್ಬರು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟವರಲ್ಲ!
ಹಿಂದೆಯೂ, ಈಗಲೂ ಕಲ್ಲಡ್ಕ ಪ್ರಭಾಕರ ಭಟ್ಟರು ಬೆಂಬಲಿಸುವ ಜಮೀನ್ದಾರಿ ವರ್ಗವು ‘ದಿನಕ್ಕೊಂದು ಗಂಡ’ ಪದ್ದತಿಯನ್ನು ಜಾರಿಯಲ್ಲಿಟ್ಟಿದೆ. ಈ ಪದ್ದತಿಯನ್ನು ವಿರೋಧಿಸಿಯೇ ಅಂಬೇಡ್ಕರ್, ಬಸವಣ್ಣ, ಮಾರ್ಕ್ಸ್, ಮಾವೋ ಸಿದ್ದಾಂತಗಳು ಕೆಲಸ ಮಾಡಿದವು. ದಿನಕ್ಕೊಬ್ಬ ಗಂಡ ಎಂಬ ಹೀನ ಅಲಿಖಿತ ಪದ್ದತಿ ಹಿಂದೂ ಜಾತಿಗ್ರಸ್ತ ಸಮಾಜದಲ್ಲಿ ಇದೆಯೇ ಹೊರತು ಇಸ್ಲಾಂನಲ್ಲಿ ಅಲ್ಲ!