ಪುತ್ತೂರು: ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಅಕ್ರಮ ಮಾರಾಟ ಪ್ರಕರಣ: ಆರೋಪಿಗೆ ಶರತ್ತುಬದ್ದ ಜಾಮೀನು.

ಕರಾವಳಿ

ಪುತ್ತೂರು: ಅಕ್ರಮವಾಗಿ ತಿಮಿಂಗಿಲದ ವಾಂತಿಯನ್ನು (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬ ಪ್ರಕರಣದ ಆರೋಪಿ ಎನ್ನಲಾಗಿದ್ದ ಅಬೂಬಕ್ಕರ್ ಸಿದ್ದೀಕ್ ಎಂಬವರಿಗೆ ಪುತ್ತೂರು ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ.

ಪೋಲೀಸ್ ಗಸ್ತು ಅರಣ್ಯ ಸಂಚಾರಿ ದಳ ಮಂಗಳೂರು ಇವರಿಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ದಿನಾಂಕ 19 /12/2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರದ ಕೋರ್ಟ್ ರಸ್ತೆ ಬಳಿಯ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರ ರಸ್ತೆಯಲ್ಲಿ KA.21 Z 3733 ಸಂಖ್ಯೆಯ ಮಾರುತಿ ಕಾರಿನಲ್ಲಿ ಅಕ್ರಮವಾಗಿ ಸುಮಾರು 3.5 ಕಿಲೋ ತೂಕದ ಕೋಟ್ಯಾಂತರ ರೂಪಾಯಿ ಬೆಳೆಬಾಳುವ ಅಂಬರ್ ಗ್ರೀಸ್, ತಿಮಿಂಗಿಲದ ವಾಂತಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಕಾರು ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡು, ಆರೋಪಿಯ ವಿರುದ್ಧ ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ,ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿತ್ತು.

ಆರೋಪಿ ಅಬೂಬಕ್ಕರ್ ಸಿದ್ದೀಕ್ ಮಾನ್ಯ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರ ಮತ್ತು ಆರೋಪಿ ಪರ ವಕೀಲರ ವಾದ ವಿವಾದವನ್ನು ಆಲಿಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯವು ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.ಆರೋಪಿ ಪರ ’ಕಜೆ ಲಾ ಛೇಂಬರ್ಸ್’ ಪುತ್ತೂರು ಇದರ ಮುಖ್ಯಸ್ಥರು, ಖ್ಯಾತ ನ್ಯಾಯವಾದಿಗಳು ಆದ ಮಹೇಶ್ ಕಜೆ ವಾದಿಸಿದ್ದರು.