ಪುತ್ತೂರು: ತನ್ನದೇ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಪಾಣಾಜೆಯ ನಿವಾಸಿ ಅಬ್ದುಲ್ ಶೆಹನಾದ್ ಸಮೀಮ್ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ತನ್ನ ನೆರೆಯ ನಿವಾಸಿ ಅಪ್ರಾಪ್ತ ಬಾಲಕಿಯ ಮನೆಯಲ್ಲಿ ಆರೋಪಿಯು ಅಪ್ರಾಪ್ತೆಯನ್ನು ಮರುಳು ಮಾಡಿ, ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸಿ, ಬೆದರಿಕೆ ಒಡ್ಡಿರುವುದಾಗಿ ಪ್ರಕರಣ ದಾಖಲಾಗಿತ್ತು.
ದಿನಾಂಕ 23/10/2023 ರಂದು ರಾತ್ರಿ 07:00 ರ ಸಮಯಕ್ಕೆ ಅಪ್ರಾಪ್ತ ಬಾಲಕಿಯ ತಾಯಿ ಮನೆ ಹತ್ತಿರದಲ್ಲಿರುವ ಅಜ್ಜಿ ಮನೆಗೆ ಬೀಡಿ ಕಟ್ಟಲು ಹೋದ ಸಂದರ್ಭದಲ್ಲಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆರೋಪಿ ಅಬ್ದುಲ್ ಶೆಹನಾಝ್ ಶಮೀಮ್ ಅಪ್ರಾಪ್ತ ಬಾಲಕಿಯ ಅಂಗಾಂಗಕ್ಕೆ ಕೈ ಹಾಕಿದ ಸಂದರ್ಭದಲ್ಲಿ ಆಕೆಯು ಬೊಬ್ಬೆ ಹೊಡೆದಾಗ, ಈ ವಿಚಾರವನ್ನು ಬೇರೆಯವರಲ್ಲಿ ಹೇಳಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿ ಮನೆಯಿಂದ ಆರೋಪಿಯು ಓಡಿ ಹೋಗಿರುವುದಾಗಿ ಆರೋಪಿಸಿ ಬಾಲಕಿಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದಲ್ಲಿ ಪುತ್ತೂರು ಮಹಿಳಾ ಠಾಣಾ ಪೊಲೀಸರು ಭಾರತೀಯ ದಂಡ ಸಂಖ್ಯೆಯ ಕಲಂ 376,354(A),506, ಮತ್ತು ಪೋಕ್ಸೋ ಕಾಯ್ದೆಯ ಕಲಂ 4 ರನ್ವಯದಂತೆ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ, ಆರೋಪಿ ಅಬ್ದುಲ್ ಶೆಹನಾದ್ ಸಮೀಮ್ ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂದನ ವಿಧಿಸಿತ್ತು.
ತದ ನಂತರ ಆರೋಪಿಯು ತನ್ನ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲು ಪುತ್ತೂರಿನ “ಕಜೆ ಲಾ ಚೇಂಬರ್ಸ್” ಇದರ ಮುಖ್ಯಸ್ಥರು, ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ಮತ್ತು ಪುತ್ತೂರಿನ ವಕೀಲರಾದ ಶ್ರೀಮತಿ ರಮ್ಲತ್ ಅವರ ಮುಖಾಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್ ವಿ ರವರು ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ.