ಅಕ್ರಮ ಮದ್ಯ ಮಾರಾಟ ಪ್ರಕರಣ: ಗಂಜಿಮಠ ಗ್ರಾ.ಪಂ. ಸದಸ್ಯ ಜಯಾನಂದ ಕುಲಾಲ್ ಬಂಧನ

ಕರಾವಳಿ

ಬಿಜೆಪಿ ಬೆಂಬಲಿತ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ, ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಯಾನಂದ ಕುಲಾಲ್ ಎಂಬವರ ಮೇಲೆ ಅಕ್ರಮ ಮದ್ಯ ಮಾರಾಟ ಆರೋಪದಡಿ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಮಾಲು ಸಮೇತ ಬಂಧಿಸಿದ್ದಾರೆ.

ದಿನಾಂಕ 27-12-2023 ರಂದು ಸಂಜೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಗೆ ತೆರಳಿದ್ದ ಇಲಾಖಾ ವಾಹನ ಸಂಜೆ 5.45 ರ ಹೊತ್ತಿಗೆ ಮೊಗರು ಗ್ರಾಮದ ತೆಕ್ಕೆಮಾರ್ ಎಂಬಲ್ಲಿ ರಸ್ತೆ ಬಳಿಯಲ್ಲೇ ಇರುವ ಜಯಾನಂದ ಕುಲಾಲ್ ಎಂಬವರ ಅಂಗಡಿ ಬಳಿ ಹಾದುಹೋದಾಗ ಅಂಗಡಿ ಮುಂದೆ ನಿಂತಿದ್ದ ಗಿರಾಕಿಗಳು ಓಡಿ ತಪ್ಪಿಸಿಕೊಂಡಿದ್ದು, ಅನುಮಾನ ಗೊಂಡ ಪೊಲೀಸರು ಅಂಗಡಿಗೆ ತೆರಳಿ ಪರಿಶೀಲಿಸಿದಾಗ ಅಂಗಡಿಯ ಶೊಕೇಸ್ ನ ಅಡಿಯಲ್ಲಿ ಪ್ಲಾಸ್ಟಿಕ್ ಕವರಿನಲ್ಲಿ ಮದ್ಯದ ಟೆಟ್ರಾ ಪ್ಯಾಕ್ ಗಳು ಕಂಡುಬಂದಿದ್ದು, ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮದ್ಯ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಪರಾದ ಸಂಖ್ಯೆ 0209/2023 ರಂತೆ ಎಫ್ ಐ ಆರ್ ದಾಖಲಿಸಿ, 90 MLನ ಒಟ್ಟು 18 ಟೆಟ್ರಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊಗರು ಕಲ್ಲಾಡಿಯ ಜಯಾನಂದ ಕುಲಾಲ್ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಈ ಹಿಂದೆಯು ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿಯ ಸ್ಥಳೀಯ ಪ್ರಮುಖ ಮುಖಂಡರಾಗಿರುವ, ಜನಪ್ರತಿನಿಧಿಯೂ ಆಗಿರುವ ಕುಲಾಲ್ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಸ್ಥಳೀಯವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಓರ್ವ ಜನಪ್ರತಿನಿಧಿಯಾಗಿ ಇಂತಹ ಕೆಲಸ ಮಾಡುವುದು ಶೋಭೆಯೇ.? ಕುಲಾಲ್ ಗ್ರಾಮ ಪಂಚಾಯತ್ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ಕೂಗು ಕೇಳಿ ಬರುತ್ತಿದೆ.