ಚುನಾವಣಾ ಸಮಯದಲ್ಲಿ ಹಾವು-ಮುಂಗುಸಿಯಂತೆ ಪರಸ್ಪರ ಕಚ್ಚಾಡುವ ಬಿಜೆಪಿ-ಕಾಂಗ್ರೆಸ್ ಪಕ್ಷದ ಮುಖಂಡರು ಅಕ್ರಮ ದಂಧೆಯಲ್ಲಿ ಸಮಾನ ಪಾಲುದಾರರಾಗಿ ಭಾಯಿ ಭಾಯಿ ಆಗಿರುವ ಘಟನೆ ಮೂಲ್ಕಿ ಪರಿಸರದಲ್ಲಿ ನಡೆಯುತ್ತಿದೆ. ಮುಲ್ಕಿ ಶಾಂಭವಿ ನದಿಯ ಪಟ್ಟೆ, ಸಂಕಲಕರಿಯ, ಬಳ್ಕುಂಜೆ, ಉಳ್ಲೆಪಾಡಿ ಎಂಬಲ್ಲಿ ಸುಮಾರು 14 ರಿಂದ 15 ದಕ್ಕೆಗಳಲ್ಲಿ ರಾಜರೋಷಾಗಿ ಅಕ್ರಮ ಮರಳುಗಾರಿಕೆ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದೂ ಬಿಜೆಪಿ-ಕಾಂಗ್ರೆಸ್ಸಿಗರು ಇದಕ್ಕೆ ಸಾಥ್ ನೀಡಿ,ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲ್ಕಿ ಪರಿಸರದ ಶಾಂಭವಿ ನದಿ ಮಾತ್ರವಲ್ಲ ಪಡುಪಣಂಬೂರು ಗ್ರಾಮ ಪಂಚಾಯತ್ ಗಡಿ ಪ್ರದೇಶದ ಚಿತ್ರಾಪು ಬಬ್ಬು ಗುಂಡಿ ನಂದಿನಿ ನದಿ, ಪಾವಂಜೆ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಬಬ್ಬು ಸ್ವಾಮಿಯ ಕಾರಣಿಕ ಪ್ರದೇಶವಾದ ಬಬ್ಬು ಗುಂಡಿ ಬಳಿ ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಪ್ರಭಾವಿಗಳ ಕೈವಾಡ ಇರುವುದರಿಂದ ಮುಲ್ಕಿ ಪೊಲೀಸರಾಗಲಿ, ಪೊಲೀಸ್ ಇಲಾಖೆ ಸಂಬಂದ ಪಟ್ಟ ಅಧಿಕಾರಿಗಳಾಲಿ, ಗಣಿ-ಭೂ ವಿಜ್ಞಾನ ಇಲಾಖೆ ಆಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯ ನಾಗರಿಕರ ಅಳಲು. ಅಕ್ರಮ ಧೋ ನಂಬರ್ ದಂಧೆ, ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಸ್ಥಳೀಯ ಹೋರಾಟಗಾರರ ಧ್ವನಿಯನ್ನು ಬೆದರಿಕೆ ಮೂಲಕ ದೋ ನಂಬರ್ ದಂಧೆಕೋರರು ಅಡುಮಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಉಡುಪಿ ಭಾಗದ ಪಲಿಮಾರು ಮಟ್ಟು ಭಾಗದ ಅಕ್ರಮ ಮರಳುಗಾರಿಕೆಯನ್ನು ಸ್ಥಳೀಯರ ಒಗ್ಗಟ್ಟಿನ ಪ್ರಬಲ ವಿರೋಧದಿಂದಾಗಿ ಬಂದ್ ಆಗಿತ್ತು. ಆದರೆ ಮಂಗಳೂರು ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಯಾಂತ್ರಿಕ ದೋಣಿಗಳಿಗೆ ಪಂಪ್ ಸೆಟ್ ಗಳನ್ನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಸೇತುವೆಗಳು ಕುಸಿಯುವ ಭೀತಿ ಎದುರಾಗಿದೆ.
ಮೂಲ್ಕಿ ಪರಿಸರವೇ ದೋ ನಂಬರ್ ದಂಧೆಕೋರರ ಅಡ್ಡೆಯಾಗಿ ಬಿಟ್ಟಿದೆ. ಬಹುಶಃ ಮೂಲ್ಕಿ ಪೊಲೀಸ್ ಲಿಮಿಟಿನಲ್ಲಿ ನಡೆಯುವಷ್ಟು ಅಕ್ರಮ ಚಟುವಟಿಕೆಗಳು ಬೇರೆ ಕಡೆ ಇಲ್ಲ ಎಂದೇ ಹೇಳಬೇಕು. ಇಸ್ಪೀಟ್, ಗ್ಯಾಬ್ಲಿಂಗ್ ಕೋಳಿ ಅಂಕ, ಮಡ್ಕಾ ದಂಧೆ ಸೇರಿದಂತೆ ಹಲವು ದೋ ನಂಬರ್ ದಂಧೆ ಇಲ್ಲಿ ನಿರಾತಂಕ. ಕೆಲವು ದಿನಗಳ ಹಿಂದೆ ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾರಗಟ್ಟಲೆ ಗ್ಯಾಬ್ಲಿಂಗ್ ಕೋಳಿ ಅಂಕ ನಡೆಯುವ ಬಗ್ಗೆ ಎರಡು ಮೂರು ಬಾರಿ ಸ್ವೆಷಲ್ ನ್ಯೂಸ್ ಮೀಡಿಯಾದಲ್ಲಿ ವರದಿ ಬಿತ್ತರಿಸಲಾಗಿತ್ತು. ಕೋಟಿಗಟ್ಟಲೆ ಬಾಜಿನ ವ್ಯವಹಾರ ಕೂಡ ನಡೆಯುತ್ತಿತ್ತು. ಇದೀಗ ಜಾತ್ರೆ, ಸಂಪ್ರದಾಯದ ಹೆಸರಿನಲ್ಲಿ ಕೆಲವೆಡೆ ವಾರವಿಡೀ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿರುವುದರಿಂದ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಸಂಬಂಧ ಪಟ್ಟ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಅಳಲು.
ಅಕ್ರಮ ಮರಳುಗಾರಿಕೆಯಿಂದಾಗಿ ನದಿಯ ಒಡಲು ಖಾಲಿಯಾಗುತ್ತ ಹೋಗಿ ಅಂತರ್ಜಲ ಕುಸಿಯುವ ಸಾಧ್ಯತೆ ಹೆಚ್ಚಿದೆ. ಯಾಂತ್ರಿಕ ದೋಣಿಗಳಿಗೆ ದೊಡ್ಡ ದೊಡ್ಡ ಪಂಪ್ ಸೆಟ್ ಗಳನ್ನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಇದು ತುಂಬಾ ಅಪಾಯಕಾರಿ. ಈಗಾಗಲೇ ಪಲಿಮಾರು ಆಣೆಕಟ್ಟುವಿನ ಸಮೀಪ ಮತ್ತು ಹೋಯಿಗೆ ಸಮೀಪ ಇದ್ದ 2 ಸಣ್ಣ ಸಣ್ಣ ದ್ವೀಪ (ಕುದುರು)ಗಳು ಮಾಯವಾಗಿದೆ. ನದಿಗೆ ಅಡ್ಡಳಾಗಿ ಕಟ್ಟಿರುವ ಸಾರಿಗೆ ಸೇತುವೆ ಮತ್ತು ಕೊಂಕಣ ರೈಲ್ವೆಯ ಸೇತುವೆಗಳಿಗೂ ಕೂಡ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಕಾನೂನಿನ ಭಯವಿಲ್ಲದೆ ಶಾಂಭವಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ಕೂಡಲೇ ಜಿಲ್ಲಾಧಿಕಾರಿಗಳು ನಿಯಂತ್ರಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮುಲ್ಕಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಹಾಗೂ ಕಂದಾಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಬೇಕು ಎಂದು ಸ್ಥಳೀಯ ನಾಗರೀಕರು ಒತ್ತಾಯಿಸಿದ್ದಾರೆ.