ಕೊಪ್ಪಳ: ಐದು ವರ್ಷದಲ್ಲಿ 219 ಅಪ್ರಾಪ್ತ ಬಾಲಕಿಯರು ಹೆರಿಗೆ ಮಾಡಿಸಿಕೊಂಡ ಅಘಾತಕಾರಿ ಅಂಶ ಬೆಳಕಿಗೆ

ರಾಜ್ಯ

ಕೊಪ್ಪಳ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗಿಲ್ಲ. ಐದು ವರ್ಷದಲ್ಲಿ ಬರೊಬ್ಬರಿ 219 ಬಾಲಕಿಯರು ಹೆರಿಗೆ ಮಾಡಿಸಿಕೊಂಡ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಕಾನೂನು ಪ್ರಕಾರ ವಿವಾಹಕ್ಕೆ ಮಹಿಳೆಯರಿಗೆ 18 ವರ್ಷ ತುಂಬಿರಬೇಕು. ಈ ಮಧ್ಯೆ, ಮಹಿಳೆಯರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅಸ್ತು ಎಂದಿದೆ. ಇಷ್ಟಾದರೂ, ಸರ್ಕಾರದ ಜಾಗೃತಿ ಕಾರ್ಯದ ಹೊರತಾಗಿಯೂ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾತ್ರ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿಂದೆ ಬಾಲ್ಯ ವಿವಾಹಕ್ಕೆ ಕೊಪ್ಪಳ ಜಿಲ್ಲೆ ಸುದ್ದಿಯಾಗುತ್ತಿತ್ತು. ಆದರೆ ಬಾಲ್ಯವಿವಾಹ ನಿಯಂತ್ರಣಕ್ಕೆ ಬಂತು ಎಂದು ಹೇಳುತ್ತಿರುವಾಗಲೇ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸರ್ಕಾರದ ಅಂಕಿ-ಅಂಶಗಳನ್ನು ಅಣಕಿಸುವಂತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಕೇವಲ ಜಿಲ್ಲಾಸ್ಪತ್ರೆ ಮತ್ತು ಆಸ್ಪತ್ರೆಗೆ ಬಂದಿರುವ ಪ್ರಕರಣಗಳ ಲೆಕ್ಕಾಚಾರ. ತಾಯಿ ಮತ್ತು ಮಗುವಿನ ಕಾರ್ಡ್ ಹೊಂದಿರುವ ಗರ್ಭಿಣಿಯರು ಮತ್ತು ಬಾಣಂತಿಯರ ಲೆಕ್ಕಾಚಾರದ ವೇಳೆ ಇಷ್ಟು ಸಂಖ್ಯೆಯಲ್ಲಿ ಬಾಲ ಗರ್ಭಿಣಿಯರ ಪ್ರಮಾಣ ಪತ್ತೆಯಾಗಿದೆ. ಇನ್ನು ಮನೆಯಲ್ಲೇ ಹೆರಿಗೆ ಆದ ಹಾಗೂ ತಾಯಿ ಮತ್ತು ಮಗುವಿನ ಕಾರ್ಡ್ ಮಾಡಿಸದೇ ಇರುವವರ ಲೆಕ್ಕಾಚಾರ ಹಾಕಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. 2019-20ರಲ್ಲಿ 30 ಇದ್ದ ಬಾಲಗರ್ಭಿಣಿಯರ ಸಂಖ್ಯೆ 2023-24ರಲ್ಲಿ 66 ಆಗಿದೆ.

ಬಾಲ ಗರ್ಭಿಣಿಯರ ವಿಚಾರವಾಗಿ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಾದ ಆರೋಗ್ಯ ಇಲಾಖೆ ಮಾತ್ರ ಆಧಾರ್ ಕಾರ್ಡ್‌ನಲ್ಲಿ ವಯಸ್ಸು ನಮೂದಿಸುವುದರಲ್ಲಿ ವ್ಯತ್ಯಾಸ ಇರಬಹುದು ಎಂದು ಸಬೂಬು ನೀಡುತ್ತಿದೆ. ಇದನ್ನು ನಂಬಲಾಗದು ಎನ್ನುತ್ತಾರೆ ಸಾರ್ವಜನಿಕರು.