ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಪ್ರತಿಭಟನೆ ನಿರತರ ಮೇಲೆ ಎಫ್ಐಆರ್ ದಾಖಲಿಸಿದ ಪೋಲೀಸ್ ನಡೆಗೆ ಖಂಡನೆ: ಡಿವೈಎಫ್ಐ

ಕರಾವಳಿ

ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಿ ಉದ್ರೇಕಕಾರಿ ಭಾಷಣ ಮಾಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯಿಸಿ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ನಿನ್ನೆ ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನಾಕಾರರ ಮೇಲೆ ಉಳ್ಳಾಲ ಠಾಣಾ ಪೋಲೀಸರು ಪ್ರಕರಣ ದಾಖಲಿಸಿದ ಕ್ರಮವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸುತ್ತದೆ. ಮತ್ತು ಉಳ್ಳಾಲ ಪೊಲೀಸರ ಇಂತಹ ನಡೆಯ ವಿರುದ್ಧ ಹೋರಾಟ ರೂಪಿಸುವ ತೀರ್ಮಾನವನ್ನು ಕೈಗೊಂಡಿದೆ.

ರಾಜ್ಯದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಪಡಿಸುವ, ಗುಂಪು ಘರ್ಷಣೆಗೆ ಎಡೆಮಾಡಿಕೊಡುವ, ಮತೀಯ ಕಲಹಗಳನ್ನು ಸೃಷ್ಟಿಸುವಂತಹ ಹೇಳಿಕೆಗಳನ್ನು, ಭಾಷಣಗಳನ್ನು ಬಹಿರಂಗವಾಗಿ ಆಡುವ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ ನಂತಹ ಆರ್.ಎಸ್.ಎಸ್ ಮುಖಂಡರುಗಳಿಗೆ ಮತ್ತವರ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವ ಪೊಲೀಸ್ ಇಲಾಖೆ ಅದೇ ಜಾತ್ಯಾತೀತ ಮೌಲ್ಯಗಳನ್ನು ಉಳಿಸುವ, ದೇಶದ ಸಂವಿಧಾನದ ಆಶಯಗಳನ್ನು ರಕ್ಷಿಸುವ, ನೆಲದ ಕಾನೂನುಗಳಿಗೆ ಗೌರವ ಕೊಡುವ ಜನಪರ ಸಂಘಟನೆಗಳು ಇಂತಹ ಮತೀಯವಾದಿಗಳ ನಡೆಯನ್ನು ಖಂಡಿಸಿ ಪ್ರತಿಭಟಿಸಲು ಅವಕಾಶ ನಿರಾಕರಿಸುವುದು, ಮತ್ತವರ ಮೇಲೇನೇ ಪ್ರಕರಣ ದಾಖಲಿಸುವುದು ಎಷ್ಟು ಸರಿ.? ಎಂದು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಉತ್ತರಿಸಬೇಕು.

ಕಲ್ಲಡ್ಕ ಪ್ರಭಾಕರ್ ಭಟ್ಟರ ದ್ವೇಷ ಭಾಷಣದ ಮೇಲೆ ಪ್ರಕರಣ ದಾಖಲಾದರೂ ಬಂಧಿಸಲು ಅಸಾಧ್ಯವಾದ ಸರಕಾರದ ನಡೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆಯಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯದಂತೆ ಇಲ್ಲಿಗಷ್ಟೇ ನಿರ್ಬಂಧ ಹೇರಿರೋದು ಯಾವ ಕಾರಣಕ್ಕಾಗಿ ಎಂದು ಜಿಲ್ಲಾಡಳಿತ ಉತ್ತರಿಸಬೇಕು. ಜಿಲ್ಲೆಯಲ್ಲಿ ಪ್ರತಿಭಟನೆಗೆ ಅವಕಾಶ ನೀಡದೆ ನಿರ್ಬಂಧ ಹೇರಿರೋದು ಯಾವ ಕಾರಣಕ್ಕೆಂದು ಸಾರ್ವಜನಿಕರ ಗಮನಕ್ಕೆ ತರದೇ ಎಕಾಏಕೀ ಪ್ರತಿಭಟಿಸುವವರ ಮೇಲೆ ಪ್ರಕರಣ ದಾಖಲಿಸುವ ಉದ್ದೇಶವಾದರು ಏನಿತ್ತು?.

ಪ್ರತಿಭಟಿಸುವುದು ದೇಶದ ಸಂವಿಧಾನ ಕೊಡಮಾಡಿರುವ ಹಕ್ಕು. ಪ್ರತಿಭಟನೆಯಲ್ಲಿ ಧ್ವನಿವರ್ಧಕ ಬಳಸೋದಕ್ಕಷ್ಟೇ ಪೊಲೀಸ್ ಇಲಾಖೆಯ ಅನುಮತಿಗಳು ಬೇಕೇ ಹೊರತು ಪ್ರತಿಭಟನೆಗಳಿಗಲ್ಲ. ಡಿವೈಎಫ್ಐ ನಡೆಸಿದ ಪ್ರತಿಭಟನೆಯ ಬಗ್ಗೆ ಪೊಲೀಸರ ಗಮನಕ್ಕೆ ತರಲಾಗಿದೆ. ಆದರೂ ಪೊಲೀಸ್ ಇಲಾಖೆ ಡಿವೈಎಫ್ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ ಜಿಲ್ಲೆಯ ಪೊಲೀಸರ ನಡೆಯನ್ನು ಡಿವೈಎಫ್ಐ ಖಂಡಿಸುತ್ತದೆ.

ಸರ್ವ ಜನಾಂಗದ ಶಾಂತಿಯ ತೋಟ ಮಾಡಲೊರಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರಕ್ಕೆ ಮಾನ ಮರ್ಯಾದೆ ಅನ್ನೋದು ಇದೆಯೇ?. ತನ್ನ ಭಾಷಣದ ಮೂಲಕ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುವ ಕೋಮುವಾದಿ ಕಲ್ಲಡ್ಕ ಪ್ರಭಾಕರ ಭಟ್ಟನ್ನು ಬಂಧಿಸಲು ಸಾಧ್ಯವಾಗದ ಕಾಂಗ್ರೆಸ್ ಸರಕಾರದಿಂದ ಇನ್ನೇನೂ ನಿರೀಕ್ಷಿಸಲು ಸಾದ್ಯವಿಲ್ಲ. ಬಿಜೆಪಿ ಮತೀಯ ರಾಜಕಾರಣದಿಂದ ಬೇಸತ್ತ ರಾಜ್ಯದ ಜನ ಈ ಬಾರಿ ಕಾಂಗ್ರೇಸ್ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಮರೆಯಬಾರದು. ರಾಜ್ಯ ಸರಕಾರದ ಈ ರೀತಿಯ ಜನವಿರೋಧಿ ಆಡಳಿತದ ವಿರುದ್ಧ ಹಾಗೂ ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರ ನಡೆಯ ವಿರುದ್ಧ ಹೋರಾಟಗಳನ್ನು ರೂಪಿಸಲು ಡಿವೈಎಫ್ಐ ತೀರ್ಮಾನಿಸಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.