ಬೆಳಗಾವಿ ಜಿಲ್ಲೆಯ ಹಾಸ್ಟೆಲ್‌ನಲ್ಲಿ ವಾರ್ಡನ್ ಮಹಿಳೆಯೊಬ್ಬಳು ಕೆಎಎಸ್ ಅಧಿಕಾರಿಯಾಗಿರುವ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ನೋಡಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿ ಆಕೆಯ 9 ವರ್ಷದ ಮಗಳು ಅಲ್ಲಿನ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ಪ್ರಕರಣ ಬೈಲಹೊಂಗಲದಲ್ಲಿ ನಡೆದಿದ್ದರಿಂದ ನಗರದ ಪೋಕ್ಸೊ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣವನ್ನು ಬೈಲಹೊಂಗಲ ಠಾಣೆಗೆ ವರ್ಗಾಯಿಸಲಾಗಿದೆ.
9 ವರ್ಷದ ಬಾಲಕಿ ನೀಡಿದ ದೂರಿನ ಅನ್ವಯ ಆಕೆಯ ತಾಯಿ ಹಾಗೂ ಕೆಎಎಸ್ ಅಧಿಕಾರಿ ರಾಮನಗೌಡ ಕನ್ನೊಳ್ಳಿ ಎಂಬುವವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಲಬುರಗಿಯ ಸರಸ್ವತಿ ಗೋದಾಮು ಬಳಿಯ ನಿವಾಸಿಯಾಗಿದ್ದ ಬಾಲಕಿಯ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಬಳಿಕ ತಾಯಿಯು ಸ್ವಂತ ಊರಾದ ಬೆಳಗಾವಿ ಜಿಲ್ಲೆಯ ಪಟ್ಟಣವೊಂದರಲ್ಲಿ ವಾಸವಾಗಿದ್ದಳು. ಈ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಆಗಿರುವ ತಾಯಿ ತನ್ನ ಹಿರಿಯ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಲವು ಬಾರಿ ಖಾಸಗಿ ಕ್ಷಣಗಳನ್ನು ನನ್ನ ಎದುರೇ ಕಳೆದಿದ್ದರು. ಯಾರ ಬಳಿಯೂ ಹೇಳದಂತೆ ಸಾಕಷ್ಟು ದೈಹಿಕ, ಮಾನಸಿಕ ಹಿಂಸೆ ನೀಡಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ನಮ್ಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಾಳೆ. ಹೀಗಾಗಿ ಆಕೆಯನ್ನು ಸಾಯಿಸಿ ಬಿಡುತ್ತೇನೆ ಎಂದೂ ತಾಯಿ ಹಲವು ಬಾರಿ ಹೇಳಿದ್ದಳು. ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದುದನ್ನು ನೋಡಿದ್ದೇನೆ. ಹೀಗಾಗಿ, ನನ್ನ ಮೇಲೆ ಬಿಸಿ ನೀರನ್ನು ಎರಚಿ ದೈಹಿಕ ಹಿಂಸೆ ನೀಡಿದ್ದಾಳೆ. ಹೊಡೆತದಿಂದ ಗಾಯವಾದರೂ ಆಸ್ಪತ್ರೆಗೆ ಸೇರಿಸಿಲ್ಲ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಎರಡನೇ ಆರೋಪಿಯಾಗಿರುವ ಕೆಎಎಸ್ ಅಧಿಕಾರಿ ರಾಮನಗೌಡ ವಿಜಯಪುರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು.