ದೇಶಾದ್ಯಂತ ಸುದ್ದಿಯಾಗಿದ್ದ ಬನಾರಸ್ ಹಿಂದೂ ವಿವಿ ಅವರಣದಲ್ಲಿ ಐಐಟಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಐಟಿ ಸೆಲ್‌ನಲ್ಲಿ ಗುರುತಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಎರಡು ತಿಂಗಳ ಬಳಿಕ ಬಂಧಿಸಲಾಗಿದೆ. ಬಿಎಚ್‌ಯು ಕ್ಯಾಂಪಸ್‌ನಲ್ಲಿ ಐಐಟಿಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಹಾಗೂ ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಗಳನ್ನು ಎರಡು ತಿಂಗಳು ನಂತರ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಬಿಎಚ್‌ಯು ಕ್ಯಾಂಪಸ್‌ನ ಸುತ್ತಮುತ್ತಲಿನಲ್ಲಿ ಅಳವಡಿಸಲಾಗಿದ್ದ ಸುಮಾರು 170ರಷ್ಟು ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ನಡೆದು ಸುಮಾರು ಎರಡು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ವಾರಣಾಸಿಯ ಬಿಜೆಪಿ ಐಟಿ ಸೆಲ್‌ನಲ್ಲಿ ಗುರುತಿಸಿಕೊಂಡಿದ್ದರು ಎಂದು ವರದಿಯಾಗಿದೆ. ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಸೇರಿದಂತೆ ಹಲವು ಬಿಜೆಪಿ ಮುಖಂಡರ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕಳೆದ ನವೆಂಬರ್ ಒಂದರ ರಾತ್ರಿ ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು. ಆಗ ಬೈಕ್‌ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು, ಸ್ನೇಹಿತನಿಗೆ ಬಂದೂಕು ತೋರಿಸಿ ಆತನನ್ನು ಬೇರ್ಪಡಿಸಿ, ಅವಳನ್ನು ಬಲವಂತವಾಗಿ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಬಳಿಕ ಆರೋಪಿಗಳು ಆಕೆಯನ್ನು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ ಫೋಟೋ ತೆಗೆದಿದ್ದರು. ಸುಮಾರು 15 ನಿಮಿಷಗಳ ನಂತರ ಆಕೆಯ ಫೋನ್ ನಂಬರ್ ತೆಗೆದುಕೊಂಡು ಹೋಗಲು ಬಿಟ್ಟರು ಎಂದು ದೂರಿನಲ್ಲಿ ತಿಳಿಸಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ, ಹಿಂದೂ ಬನಾರಸ್ ವಿಶ್ವವಿದ್ಯಾಲಯದ ಐಐಟಿಯ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.