ಡಿಪ್ಲೋಮಾ ಪಡೆದವರನ್ನು ಡಾಕ್ಟರ್ ಎನ್ನಲಾಗದು; ಪರವಾನಗಿ ನೀಡದ ಸರಕಾರ ಕ್ರಮ ಸಮರ್ಥಿಸಿದ ಹೈಕೋರ್ಟ್

ರಾಜ್ಯ

ಬೆಂಗಳೂರು: ಅರ್ಹತೆ ಇಲ್ಲದಿದ್ದರೂ ವೈದ್ಯರು ಎಂದು ಹೇಳಿಕೊಂಡು ಹಲವು ವರ್ಷಗಳಿಂದ ಗ್ರಾಮೀಣ ಭಾಗಗಳ ಜನರನ್ನು ವಂಚಿಸುತ್ತಿರುವವರಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಿಕೊಂಡು ಖಾಸಗಿಯಾಗಿ ವೈದ್ಯ ಸೇವೆ ಮಾಡುತ್ತಿದ್ದ ಅರ್ಜಿದಾರರಿಗೆ ಅದನ್ನು ಮುಂದುವರಿಸಲು ಪರವಾನಗಿ ನೀಡದ ಸರಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ಕ್ಲಿನಿಕ್ ನಡೆಸಲು ಹೈಕೋರ್ಟ್ ಅನುಮತಿ ನಿರಾಕರಿಸಿದ್ದ ಜಿಲ್ಲಾ ಸಕ್ಷಮ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ನ ಅಣ್ಣಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. “ಅಗತ್ಯ ಔಷಧಗಳೊಂದಿಗೆ ಸಮುದಾಯ ವೈದ್ಯಕೀಯ ಸೇವೆಯಲ್ಲಿ (ಸಿಎಂಎಸ್-ಇಡಿ) ಡಿಪ್ಲೋಮಾ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ತಿಳಿಸಿದೆ. ಅರ್ಜಿದಾರರು ಕಾನ್ಪುರದಲ್ಲಿ ಸಿಎಂಎಸ್-ಇಡಿ ಕೋರ್ಸ್ ಮಾಡಿದ್ದಾರೆ. ಅದು ಪ್ಯಾರಾ ಮೆಡಿಕಲ್ ಕೋರ್ಸ್. ಆದ್ದರಿಂದ ಖಾಸಗಿ ವೈದ್ಯರಾಗಲು ಅವಕಾಶ ನೀಡಲಾಗದು. ಜತೆಗೆ, ಅರ್ಜಿದಾರರ ವಿದ್ಯಾಬ್ಯಾಸ ಕೆಪಿಎಂಎ ಕಾಯಿದೆ ಸೆಕ್ಷನ್ 2(ಕೆ) ಗೆ ಅನ್ವಯಿಸುವುದಿಲ್ಲ ಸರಕಾರ ತಿಳಿಸಿರುವುದು ಸಮಂಜಸವಾಗಿದೆ” ಎಂದು ಪೀಠ ಆದೇಶಿಸಿದೆ.

ಅರ್ಜಿದಾರರು ಸಿಎಂಎಸ್-ಇಡಿ ಪೂರ್ಣಗೊಳಿಸಿದ್ದು, ಹೊಸದಿಲ್ಲಿಯಲ್ಲಿ ಅರೆ ವೈದ್ಯಕೀಯ ಕೋರ್ಸ್ ತರಬೇತಿ ಪಡೆದಿದ್ದಾರೆ. ಮುಂಬಯಿಯ ಕೇಂದ್ರ ಅರೆ ವೈದ್ಯಕೀಯ ಶಿಕ್ಷಣ ಮಂಡಳಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದರು. ಈ ಪ್ರಮಾಣಪತ್ರದ ಆಧಾರದಲ್ಲಿ ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಕ್ಲಿನಿಕ್ ಆರಂಭಿಸಿ ಹಲವು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಸರಕಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ-2007 ಜಾರಿಗೊಳಿಸಿತ್ತು. ಈ ಕಾಯಿದೆ 2008 ರ ಜ.23 ರಿಂದ ಜಾರಿಗೆ ಬಂದಿತು. ಅದರಂತೆ ಖಾಸಗಿಯಾಗಿ ವೈದ್ಯಕೀಯ ಸೇವೆ ನೀಡಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ ಬಳಿಕ ಸೇವೆ ಮುಂದುವರಿಸಬೇಕು ಎಂದು ತಿಳಿಸಲಾಗಿತ್ತು.

ಅರ್ಜಿದಾರರು ತಮ್ಮ ಕ್ಲಿನಿಕ್ ನೋಂದಣಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸರಕಾರ ತಿರಸ್ಕರಿಸಿ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹಲವು ಬಾರಿ ಹೈಕೋರ್ಟ್ ನ ಮೆಟ್ಟಿಲೇರಿದ್ದರು.