ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಬಸ್ ಪಲ್ಟಿ: ಹಲವಾರು ಪ್ರಯಾಣಿಕರಿಗೆ ಗಾಯ

ಕರಾವಳಿ

ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಬಿಸಿರೋಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಪೊಳಲಿ ದ್ವಾರದ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ಬಳಿಯಲ್ಲೇ ಆಳವಾದ ಕಂದಕ ಇತ್ತು. ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದರೂ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ಸಮಯವಾಗಿದ್ದರಿಂದ ಕೆಲಸ ಬಿಟ್ಟು ಮನೆಗೆ ಹೋಗುವವರು ಸೇರಿದಂತೆ 50 ರಿಂದ 60 ಪ್ರಯಾಣಿಕರಿದ್ದರು. ಆಳವಾದ ಕಂದಕಕ್ಕೆ ಬಿದ್ದಿದ್ದರೆ ಪ್ರಾಣಹಾನಿಯಾಗುವ ಸಂಭವವಿತ್ತು. ಕಳೆದ ಹಲವಾರು ಸಮಯಗಳಿಂದ ಈ ರಸ್ತೆಯ ಒಂದು ಬದಿ ಜರಿದಿದ್ದು, ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರದಿರುವುದು ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಸಹಕರಿಸಿದ್ದಾರೆ. ಗಾಯಾಳುಗಳ ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.