ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರಕ್ಕೊಮ್ಮೆ ಕಡ್ಡಾಯವಾಗಿ ತಾಲ್ಲೂಕು ಕೇಂದ್ರ ಹಾಗೂ ಗ್ರಾ.ಪಂ. ಕಚೇರಿಗಳಿಗೆ ಭೇಟಿ ನೀಡಬೇಕು: ಪ್ರಿಯಾಂಕ್ ಖರ್ಗೆ

ರಾಜ್ಯ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರಕ್ಕೊಮ್ಮೆ ಕಡ್ಡಾಯವಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ ಜಿಲ್ಲೆಗಳಲ್ಲಿ ಆಗಿರುವ ಪ್ರಗತಿ ಪರಿಶೀಲಿಸಿ ಸೂಚನೆ, ಸಲಹೆಗಳನ್ನು ನೀಡಿದರು,.

ಗ್ರಾಮೀಣ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಆಶಯ ಹಾಗೂ ಅವುಗಳ ಅಗತ್ಯತೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದಲ್ಲಿ ಕಾರ್ಯಕ್ರಮಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸಲು ಅನುಕೂಲವಾಗಬಲ್ಲದು ಎಂದು ಸಚಿವರು ಹೇಳಿದರು. ಕೆಲವು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರದ ಆದೇಶ ಸೂಚನೆಗಳಿಗೆ ಮಹತ್ವ ನೀಡದೆ, ತಮ್ಮದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸರ್ಕಾರದ ಆದೇಶಗಳನ್ನು ಪಾಲಿಸದೇ ಇರುವ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಇರುವ ಇಲಾಖಾ ತನಿಖೆಗಳು ಹಾಗೂ ಲೋಕಾಯುಕ್ತ ತನಿಖೆಗಳ ಸಂಬಂಧದಲ್ಲಿ ತ್ವರಿತ ಕ್ರಮ ಆಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ವಿಳಂಬ ಮಾಡದೆ ಕ್ರಮ ಕೈಗೊಂಡು ಪ್ರಕರಣಗಳಿಗೆ ಅಂತ್ಯ ಹಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. 253 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, 130 ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಇತರ 32 ಸಿಬ್ಬಂದಿ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇಲಾಖಾ ತನಿಖೆ ಬಾಕಿಯಿದೆ.