ನಾಗರಿಕ ಸಮಾಜ ತಲೆ ತಗ್ಗಿಸಿದ ಹೊಸ ವಂಟಮುರಿ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿ ವ್ಯಾಜ್ಯ ಮತ್ತು ಇತರ ಕಾರಣಕ್ಕಾಗಿ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಮಹಿಳೆಯೊಬ್ಬರನ್ನು ಅರೆ ಬೆತ್ತಲೆಗೊಳಿಸಿ, ಎಳೆದಾಡಿ ಹಲ್ಲೆ ಮಾಡಲಾಗಿದೆ. ಗ್ರಾ.ಪಂ ಕಚೇರಿಯಲ್ಲೇ ಈ ಘಟನೆ ನಡೆದಿದ್ದರೂ ಯಾರೂ ತಡೆಯಲು ಮುಂದಾಗಿಲ್ಲ ಎನ್ನಲಾಗಿದೆ. ಡಿಸೆಂಬರ್ 30 ರಂದೇ ನಡೆದಿರುವ ಈ ಪ್ರಕರಣ ಸಂಬಂಧ ಸಂತ್ರಸ್ತೆ 20 ಜನರ ವಿರುದ್ಧ ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆಯ ಮಾವ ತಮ್ಮ ಹೆಸರಿನಲ್ಲಿದ್ದ ಜಮೀನಿನ ಪೈಕಿ ಕೆಲ ಭಾಗವನ್ನು ಬಣವೆ ಹಾಕಲು ಮಹಿಳೆಗೆ ಖರೀದಿ ಕೊಟ್ಟಿದ್ದರು. ಕೆಲವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ತೀರ್ಪು ಮಹಿಳೆ ಪರವಾಗಿ ಬಂದಿತ್ತು. ಇದರಿಂದ ಆರೋಪಿಗಳು ಅಸಮಾಧಾನಗೊಂಡಿದ್ದರು. ಬಣವೆ ಹಾಕಿದ ಜಮೀನಿನ ಸಮೀಪ ಆರೋಪಿತರು ನೀರಿನ ಪೈಪ್ ಲೈನ್ ಅಳವಡಿಸಿದ್ದರು. ಮಹಿಳೆ ಲೋಕೋಪಯೋಗಿ ಇಲಾಖೆಗೆ ದೂರು ನೀಡಿ, ಪೈಪ್ ಲೈನ್ ಮಾರ್ಗ ಬದಲಿಸಬೇಕೆಂದು ವಿನಂತಿಸಿದ್ದರು. ಇಲಾಖೆ ಕೂಡ ಕ್ರಮ ಕೈಗೊಂಡಿತ್ತು. ಇದರಿಂದ ಸಿಟ್ಟಾದ ಆರೋಪಿತರು ಮಹಿಳೆಯ ಬ್ಯಾಗ್ ಕಸಿದುಕೊಂಡು, ಅದರಲ್ಲಿದ್ದ 1.5 ಲಕ್ಷ ರೂಪಾಯಿ ಹಣ ಕಿತ್ತುಕೊಂಡು ಹಲ್ಲೆ ನಡೆಸಿದ್ದರು. ನಂತರ ಆಕೆಯನ್ನು ಅರೆಬೆತ್ತಲೆಗೊಳಿಸಿ, ಗೂಡ್ಸ್ ವಾಹನದಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಕರೆದೊಯ್ದು ಕೂಡಿ ಹಾಕಿದ್ದರು. ಅಲ್ಲಿ ಬಿಳಿ ಹಾಳೆ ಹಾಗೂ ಕೆಲ ಬಾಂಡ್ ಪೇಪರ್ ಗಳ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದರೆ ಜೀವ ತೆಗೆಯುವ ಬೆದರಿಕೆ ಒಡ್ಡಿದ್ದರು. ಈ ಎಲ್ಲ ವಿಷಯವನ್ನು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.