ರಾಮಭಕ್ತ, ಕರಸೇವಕ ಎಂದು ನಕಲಿ ವೇಷ.! ಶ್ರೀಕಾಂತ್ ಆಲಿಯಾಸ್ ಕಾಂತ್ಯಾ ವಿರುದ್ಧ ಬರೋಬ್ಬರಿ 16 ಕ್ರಿಮಿನಲ್ ಪ್ರಕರಣ

ರಾಜ್ಯ

ಶ್ರೀಕಾಂತ್ ಪೂಜಾರಿ ವಿರುದ್ಧ 1991ರಿಂದ ಇಲ್ಲಿಯವರೆಗೆ ಅಂದರೆ
31 ವರ್ಷಗಳಲ್ಲಿ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತದೆ. 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಕುರಿತಾದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಯಾದ ಶ್ರೀಕಾಂತ್ ಪೂಜಾರಿ. ಶ್ರೀಕಾಂತ್ ಯಾರು, ಆತನ ಹಿನ್ನೆಲೆಯೇನು.?ಶ್ರೀಕಾಂತ್ ಪೂಜಾರಿ ತನ್ನನ್ನು ತಾನು ಹಿಂದೂ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾನೆ. ಹಲವಾರು ಗಲಭೆಕೋರ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಈತನ ಮೇಲೆ 1992ರಿಂದ ಇಲ್ಲಿಯವರೆಗೆ ಬರೋಬ್ಬರಿ 16 ಪ್ರಕರಣಗಳು ದಾಖಲಾಗಿವೆ.

1991ರಲ್ಲಿ ಇಡೀ ದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಭುಗಿಲೆದ್ದಿದ್ದ ಹಿಂಸಾಚಾರದ ಸಂದರ್ಭದಲ್ಲಿ, ಶ್ರೀಕಾಂತ್ ತಾನು ಹಿಂದೂ ಯವಕರ ತಂಡದೊಂದಿಗೆ ಬೀದಿಗಿಳಿದು ಹುಬ್ಬಳ್ಳಿಯಲ್ಲಿ ಅಡಿಕೆ ಅಂಗಡಿ ಹಾಗೂ ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಆರೋಪಕ್ಕೊಳಗಾಗಿದ್ದ. ಆಗಲೂ ಆತನನ್ನು ಬಂಧಿಸಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆತನ ವಿರುದ್ಧ ದಾಖಲಾಗಿರುವ 16 ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಗಲಭೆ, ದೊಂಬಿಗೆ ಸಂಬಂಧಿಸಿದವು. 1991ರ ಗಲಭೆ ಮಾತ್ರವಲ್ಲದೆ, 1999, 2001 ಹಾಗೂ 2014ರಲ್ಲಿ ನಡೆದಿದ್ದ ಗಲಭೆ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದೆ.

ಗಲಭೆ, ದೊಂಬಿ ಕೇಸ್ ಗಳ ಹೊರತಾಗಿಯೂ, ಶ್ರೀಕಾಂತ್ ಪೂಜಾರಿ ವಿರುದ್ಧ ಜೂಜು, ಹಾಗೂ ಅಕ್ರಮ ಮದ್ಯ ಮಾರಾಟ ಕುರಿತಂತೆ ಕೆಲವು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಕೇಸ್ ಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣಕ್ಕಾಗಿಯೇ ಶ್ರೀಕಾಂತ್ ನನ್ನು ಬಂಧಿಸಲಾಗಿದೆ.

ರಾಮಭಕ್ತ, ಕರಸೇವಕ ಎಂದು ಸಮಾಜದೆದುರು ನಕಲಿ ವೇಷ ತೊಟ್ಟು ಮೆರೆಯುವ ಶ್ರೀಕಾಂತ ಪೂಜಾರಿ ಕಾನೂನಿನ ದೃಷ್ಟಿಯಲ್ಲಿ ಒಬ್ಬ ಸಮಾಜಘಾತುಕ ವ್ಯಕ್ತಿ. ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟ್ಕಾದಂಧೆ, ಜೂಜಾಟ ಮುಂತಾದ 16 ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿ. 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ.

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ 1992 ಡಿಸೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿತನಾಗಿದ್ದ, ಹುಬ್ಬಳ್ಳಿಯ ಚನ್ನಪೇಟೆಯ ಶ್ರೀಕಾಂತ್ ಆಲಿಯಾಸ್ ಕಾಂತ್ಯಾ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಅಕ್ರಮ ಮದ್ಯ ಮಾರಾಟ ಪ್ರಕರಣ, ಮೂರು ದೊಂಬಿ ಪ್ರಕರಣ ಹಾಗೂ ಒಂದು ಜೂಜಾಟ ಪ್ರಕರಣ ದಾಖಲಾಗಿದೆ. ಕಸಬಾಪೇಟೆ ಠಾಣೆಯಲ್ಲಿ 3 ಮುಂಜಾಗ್ರತಾ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿ ಶಹರ ಠಾಣೆ ವ್ಯಾಪ್ತಿಯಲ್ಲಿ 1992 ರಲ್ಲಿ ನಡೆದ ದೊಂಬಿ ಪ್ರಕರಣ ಸಹ ಈತನ ವಿರುದ್ಧ ದಾಖಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ 1998, 1999 ಹಾಗೂ 2003 ರಲ್ಲಿ ಎರಡೆರಡು ಹಾಗೂ 2002, 2006 ರಲ್ಲಿ ಒಂದು ಪ್ರಕರಣ ದಾಖಲಾಗಿದೆ. ದೊಂಬಿ ಪ್ರಕರಣಕ್ಕೆ ಸಂಬಂಧಿಸಿ 1992, 2001 ಹಾಗೂ 2014 ರಲ್ಲಿ ಕೇಸ್ ಗಳು ದಾಖಲಾಗಿದೆ. 2002 ರಲ್ಲಿ ಮಟ್ಕಾ ಜೂಜು ಪ್ರಕರಣದಲ್ಲಿ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.